ಜಿಲ್ಲೆ

ಸರ್ಕಾರಿ ಆಸ್ತಿಗಳ ಒತ್ತುವರಿ ತೆರವಿಗೆ ಆಗ್ರಹ

ಕೊಳ್ಳೇಗಾಲ: ಸ್ಮಶಾನ, ಗೋಮಾಳ ಇನ್ನಿತರ ಸರ್ಕಾರಿ ಆಸ್ತಿಗಳ ಒತ್ತುವರಿ ತೆರವು ಆಗಬೇಕು, ಗ್ರಾಮ ಠಾಣಾ ಗುರುತಿಸಿ ಇ-ಸ್ವತ್ತು ನೀಡಬೇಕು ಎಂದು ಆಗ್ರಹಿಸಿ ಗುಂಡಾಲ್ ಜಲಾಶಯದ ಅಚ್ಚು ಕಟ್ಟು ಪ್ರದೇಶದ ರೈತರ ಹಿತರಕ್ಷಣಾ ಸಂಘ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದೆ.

ಪಟ್ಟಣದ ತಾಲೂಕು ಕಚೇರಿಯಲ್ಲಿರುವ ಉಪವಿಭಾಗಾಧಿಕಾರಿ ಕಚೇರಿ ಮುಂಭಾಗ ಸಂಘದ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು.

ಈ ವೇಳೆ ಗುಂಡಾಲ್ ಜಲಾಶಯದ ಅಚ್ಚುಕಟ್ಟು ಸಂಘದ ಅಧ್ಯಕ್ಷ ದಶರಥ ಮಾತನಾಡಿ, ಟಗರಪುರದಿಂದ ಗೋಪಿನಾಥಂವರೆಗಿನ ಪ್ರದೇಶದಲ್ಲಿ ರೈತರ ಜಮೀನುಗಳು, ಕಾಲುವೆಗಳು, ಕೆರೆಗಳು, ಗೋಮಾಳ, ಸ್ಮಶಾನ ಮತ್ತು ಬಂಡಿದಾರಿ ಪ್ರದೇಶಗಳು ಅಕ್ರಮವಾಗಿ ಅತಿಕ್ರಮಿಸಿಕೊಳ್ಳಲಾಗಿದೆ. ಇವುಗಳನ್ನು ಮೂಲ ದಾಖಲೆ ಆಧಾರದ ಮೇಲೆ ತಿದ್ದುಪಡಿ ಮಾಡುವವರೆಗೆ ಧರಣಿಯನ್ನು ನಡೆಸಲಾಗುತ್ತದೆ ಎಂದು ಹೇಳಿದರು.

ಕಾವೇರಿ ನದಿಗೆ ಗಲೀಜು ನೀರು ಮತ್ತು ಯುಜಿಡಿ ನೀರು ಸೇರುತ್ತಿದೆ. ಇವು ಪರಿಸರ ಅಲ್ಲದೆ ರೈತರ ಜಮೀನಿಗೂ ನಷ್ಟ ತರುತ್ತಿವೆ. ಹೀಗಾಗಿ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಧರಣಿಯಲ್ಲಿ ಸಂಘದ ಕಾರ್ಯದರ್ಶಿ ರಾಮಕೃಷ್ಣ, ಹಿರಿಯ ಹೋರಾಟಗಾರ ಮಾಲಂಗಿ ರೇಚಣ್ಣ, ಸರಗೂರು ವೀರಭದ್ರಸ್ವಾಮಿ, ಚಿನ್ನಸ್ವಾಮಿ ಮಾಳಿಗೆ, ಹಿತ್ತಲದೊಡ್ಡಿ ನಾಗರಾಜು, ಮೋಳೆ ರಾಜಣ್ಣ, ಸೋಮಣ್ಣ, ಮಹದೇವಪ್ಪ, ಕುಣಗಳ್ಳಿ ಸಿದ್ದಪ್ಪ, ಮತೀನ್, ಮತ್ತು ಹೊಂಡರಬಾಳು ಅರಸು ಮತ್ತಿತರಿದ್ದರು.