ಕೊಳ್ಳೇಗಾಲ: ಪಟ್ಟಣದ ಮುಡಿಗುಂಡದ ಆದರ್ಶ ವಿದ್ಯಾಲಯಕ್ಕೆ ತೆರಳುವ ರಸ್ತೆಯಲ್ಲಿರುವ ಮೂರು ಮರಗಳು ಒಣಗಿ ನಿಂತಿದ್ದು ಶಾಲಾ ಮಕ್ಕಳು ಆತಂಕದಲ್ಲಿಯೇ ಸಂಚಾರ ಮಾಡಬೇಕಾದ ಪರಿಸ್ಥಿತಿ ನಿಮಾರ್ಣವಾಗಿದೆ.
ಶಾಲೆ ಪ್ರವೇಶ ದ್ವಾರ ಸಿಗುವ ಮುನ್ನವೇ 30 ರಿಂದ 40 ಅಡಿ ಉದ್ದದ ಒಣಗಿ ತರಗಲಾಗಿರುವ ಸಿಲ್ವರ್ ಟ್ರಿ ಇದೆ. ಅಲ್ಲದೆ, ಶಾಲೆಯ ಸುತ್ತ ತುಂಡಾದ ಆಲದ ಮರ, ಎತ್ತರ ಬಾಗೆ ಮರವಿದ್ದು ಅಪಾಯಕ್ಕೆ ಆಹ್ವಾನಿಸುತ್ತಿದೆ.
ಈ ಮೂರು ಮರಗಳು ರಸ್ತೆಗೆ ಹೊಂದಿಕೊಂಡಂತಿವೆ. ದಾರಿಹೋಕರು ಹಾಗೂ ಶಾಲೆಗೆ ಬರುವ ಮಕ್ಕಳು ಒಣಗಿದ ಮರಗಳ ಪಕ್ಕದಲ್ಲಿಯೇ ತೆರಳಬೇಕಿದೆ. ಅಲ್ಲದೆ, ಒಣ ಮರಗಳ ಸಮೀಪವೇ ವಿದ್ಯುತ್ ತಂತಿಯು ಹಾದು ಹೋಗಿದ್ದು ಅಪಾಯ ಕಾಡುತ್ತಿದೆ.
ಶಾಲಾ ಅವಧಿಯಲ್ಲಿ ಮಕ್ಕಳು ಹಾಗೂ ವಾಹನ ಸವಾರರು ನಿತ್ಯವೂ ಭಯದಲ್ಲಿ ಅತ್ತಿತ್ತ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಆದರ್ಶ ಶಾಲೆಯ ಎಸ್‌ಡಿಎಂಸಿ ಸದಸ್ಯರು ಅರಣ್ಯ ಇಲಾಖೆಗೆ ಮರಗಳ ತೆರವಿಗೆ ಒತ್ತಾಯಿಸುತ್ತಿದ್ದಾರೆ. ಈಗಾಗಲೇ ಒಣ ಸಿಲ್ವರ್ ಟ್ರಿ ತೆರವಿಗೆ ಅರಣ್ಯ ಇಲಾಖೆಗೆ ಅರ್ಜಿ ನೀಡಿದರೂ ಮರ ತೆರವಾಗಿಲ್ಲ. ಇನ್ನಾದರೂ ಈ ವಿಷಯವನ್ನು ಗಭೀರವಾಗಿ ತೆಗೆದುಕೊಂಡು ಅಪಾಯಕ್ಕೆ ಆಹ್ವಾನಿಸುತ್ತಿರುವ ಮೂರು ಮರಗಳನ್ನು ತೆರವುಗೊಳಿಸಬೇಕೆಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.