ಜಿಲ್ಲೆ

ಕಬ್ಬು ಸಾಗಾಣಿಕೆ ಹಣ ಬಿಡುಗಡೆ ಮಾಡಲಿ: ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಮೈಷುಗರ್ ಕಾರ್ಖಾನೆಗೆ ಸಂಬಂಧಿಸಿದಂತೆ ಕಬ್ಬು ಸರಬರಾಜು ಮಾಡಿರುವ ರೈತರಿಗೆ ಕೂಡಲೇ ಹಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ನಗರಸಭೆ ಮಾಜಿ ಸದಸ್ಯ ಶಿವಕುಮಾರ್ ನೇತೃತ್ವದಲ್ಲಿ ಡಿಸಿ ಕಚೇರಿಗೆ ತೆರಳಿದ ಬಿಜೆಪಿ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿ ಸಹಾಯಕ ಅಧಿಕಾರಿ ರೋಹಿಣಿ ಅವರಿಗೆ ಮನವಿ ಸಲ್ಲಿಸಿದರು. ಮೈಷುಗರ್ ಕಾರ್ಖಾನೆಗೆ 2025 ಜು.16ರಿಂದ ಅ.4ರವರೆಗೆ ಅಂದಾಜು 1,600 ರೈತರು ಕಬ್ಬು ಸಾಗಾಣಿಕೆ ಮಾಡಿದ್ದಾರೆ. ನಿಯಮಾನುಸಾರ ಕಬ್ಬು ಸಾಗಾಣಿಕೆ ಆಗಿ 15 ದಿನದೊಳಗೆ ರೈತರಿಗೆ ಹಣ ನೀಡಬೇಕಾಗಿರುತ್ತದೆ. ಆದರೆ ಈವರೆಗೂ ರೈತರಿಗೆ ಹಣ ಬಿಡುಗಡೆ ಮಾಡಿಲ್ಲ. ಕೇವಲ 500 ರಿಂದ 600 ಜನ ರೈತರಿಗೆ ಮಾತ್ರ ಹಣ ಬಿಡುಗಡೆ ಮಾಡಲಾಗಿದೆ. ಆದ್ದರಿಂದ ಬೇಜವಾಬ್ದಾರಿತನ ತೋರಿರುವ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ರೈತರಿಗೂ ಹಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.

ಬಿಜೆಪಿ ಎಸ್‌ಟಿ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್, ರೈತ ಮೋರ್ಚಾ ನಗರ ಅಧ್ಯಕ್ಷ ಧರ್ಮೇಂದ್ರ, ಪ್ರಧಾನ ಕಾರ್ಯದರ್ಶಿ ಬೊಮ್ಮೇಶ್, ಕೃಷ್ಣ, ನಂದೀಶ್ ಇತರರಿದ್ದರು.