ರಟ್ಟಿಹಳ್ಳಿ: ಬೆಳೆ ಪರಿಹಾರ, ಬೆಳೆ ವಿಮೆ ಮಧ್ಯಂತರ ಪರಿಹಾರ ರೈತರ ಖಾತೆಗೆ ಜಮೆ ಮಾಡುವುದು ಮತ್ತು ಸಾಲ ಮನ್ನಾಕ್ಕೆ ಒತ್ತಾಯಿಸಿ ಪಟ್ಟಣದಲ್ಲಿ ರಟ್ಟಿಹಳ್ಳಿ ಮತ್ತು ಹಿರೇಕೆರೂರು ತಾಲೂಕು ರೈತ ಸಂಘದ ಘಟಕಗಳಿಂದ ಸೋಮವಾರ ಪ್ರತಿಭಟನಾ ರ‍್ಯಾಲಿ ನಡೆಸಿ, ತಹಸೀಲ್ದಾರ್ ಕೆ. ಗುರುಬಸವರಾಜ ಅವರಿಗೆ ಮನವಿ ಸಲ್ಲಿಸಲಾಯಿತು.
ಬೆಳಗ್ಗೆ ಭಗತ್ಸಿಂಗ್ ವೃತ್ತದಲ್ಲಿ ನೂರೂರು ಸಂಖ್ಯೆಯಲ್ಲಿ ಜಮಾಯಿಸಿದ ರೈತರು, ಬೈಕ್ಗಳೊಂದಿಗೆ ರ‍್ಯಾಲಿ ಹೊರಟು ಸರ್ಕಾರದ ವಿರುದ್ಧ ಘೊಷಣೆ ಕೂಗುತ್ತ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಕಳೆದ 4 ವರ್ಷದಿಂದ ಅತಿವೃಷ್ಟಿ ಹಾಗೂ ಈ ವರ್ಷದ ಭೀಕರ ಬರಗಾಲದಿಂದಾಗಿ ಸಂಪೂರ್ಣ ಬೆಳೆ ನಾಶವಾಗಿದೆ. ರೈತರು ಎರಡು ಬಾರಿ ಸಾಲ ಮಾಡಿ ಕೃಷಿಗೆ ಬಂಡವಾಳ ಹಾಕಿ ದಿಕ್ಕು ತೋಚದಂತಾಗಿದ್ದಾರೆ. ಸಾಲಕ್ಕೆ ಹೆದರಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ತಂಡ ಆಗಮಿಸಿ ಬರ ಪರಿಸ್ಥಿತಿ ಅಧ್ಯಯನ ಮಾಡಿ, ವರದಿ ಸಲ್ಲಿಸಿ ತಿಂಗಳುಗಳೇ ಗತಿಸಿದರೂ ಇನ್ನೂ ಪರಿಹಾರ ಸಿಕ್ಕಿಲ್ಲ. ತಾಲೂಕಿನಲ್ಲಿ ಬೆಳೆ ವಿಮೆ ತುಂಬಿದ ರೈತರಿಗೆ ಮಧ್ಯಂತರ ಪರಿಹಾರವಾಗಿ 127 ಕೋಟಿ ರೂಪಾಯಿ ಮಂಜೂರಾಗಿದೆ. ಎಲ್ಲ ಫಲಾನುಭವಿಗಳ ಖಾತೆಗೆ ತಕ್ಷಣ ಪರಿಹಾರ ಹಣ ಜಮಾ ಮಾಡಬೇಕು ಎಂದು ಆಗ್ರಹಿಸಿದರು.
ಸಂಕಷ್ಟದಲ್ಲಿರುವ ರೈತರ ಕೃಷಿ ಸಾಲವನ್ನು ಸರ್ಕಾರ ಸಂಪೂರ್ಣವಾಗಿ ಮನ್ನಾ ಮಾಡಬೇಕು. ಹಿರೇಕೆರೂರ ಮತ್ತು ರಟ್ಟಿಹಳ್ಳಿ ತಾಲೂಕಿನ ಹುಲ್ಲತ್ತಿ, ಕುಡುಪಲಿ, ನಿಟ್ಟೂರು, ಹಂಸಭಾವಿ ಹಳ್ಳೂರು, ವೀರಾಪುರ ಗ್ರಾಮಗಳಲ್ಲಿ ಮಂಜೂರಾದ 110 ಕೆವಿ ಗ್ರಿಡ್ಗಳ ಕಾಮಗಾರಿ ತ್ವರಿತಗತಿಯಲ್ಲಿ ಪ್ರಾರಂಭಿಸಬೇಕು. ರೈತರ ಪಂಪ್ಸೆಟ್ಗಳಿಗೆ ಅಕ್ರಮ ಸಕ್ರಮ ಯೋಜನೆಯಡಿ 20 ಸಾವಿರ ರೂಪಾಯಿ ಕಟ್ಟಿಸಿಕೊಂಡು ಕಳೆದ ನಾಲ್ಕು ವರ್ಷದಿಂದ ಟಿ.ಸಿ. ಕಂಬ, ತಂತಿ ಅಳವಡಿಸಿಲ್ಲ. ಕೂಡಲೇ ಈ ಕೆಲಸ ಪ್ರಾರಂಭಿಸಬೇಕು. ಅಕ್ರಮ ಸಕ್ರಮ ಯೋಜನೆ ಮರು ಪ್ರಾರಂಭಿಸಬೇಕು ಎಂದರು.
ರೈತ ಸಂಘದ ತಾಲೂಕು ಅಧ್ಯಕ್ಷ ಶಂಕ್ರಗೌಡ ಶಿರಗಂಬಿ ಮಾತನಾಡಿ, ತಹಸೀಲ್ದಾರ್ ಕಚೇರಿಯಲ್ಲಿ ಡ ಉತಾರ ಮತ್ತು ವಿವಿಧ ದಾಖಲಾತಿ ನೀಡಲು ಸಿಬ್ಬಂದಿ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ಸಿಬ್ಬಂದಿಗೆ ಅಧಿಕಾರಿಗಳು ಎಚ್ಚರಿಕೆ ನೀಡಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ತಾಲೂಕು ಅಧ್ಯಕ್ಷ ಪ್ರಭುಗೌಡ ಪ್ಯಾಟಿ, ಬಸನಗೌಡ ಗಂಗಪ್ಪನವರ, ಶಂಭಣ್ಣ ಮುತ್ತಗಿ, ಗಂಗನಗೌಡ ಮುದಿಗೌಡ್ರ, ಪ್ರಶಾಂತ ದ್ಯಾವಕ್ಕಳವರ, ಪಯಾಜಸಾಬ ದೊಡ್ಮನಿ, ರಾಜು ಮುತ್ತಗಿ, ಮಲ್ಲನಗೌಡ ಮಾಳಗಿ, ಮಂಜನಗೌಡ ಸಣ್ಣಗೌಡ್ರ, ಕೆ.ವಿ. ದೊಡ್ಡಗೌಡ್ರ, ಮಂಜಣ್ಣ ಬಾಗೋಡಿ, ಈರಪ್ಪ ಮಳ್ಳೂರ, ರಂಗಪ್ಪ ಮಲೆಬೆನ್ನೂರ, ಮಹೇಂದ್ರಪ್ಪ ತಳವಾರ, ರೈತ ಸಂಘದ ಸದಸ್ಯರು ಉಪಸ್ಥಿತರಿದ್ದರು.