ಮಂಗಳೂರು: ರಾಜ್ಯಪಾಲರನ್ನು ಬಾಂಗ್ಲಾ ಮಾದರಿಯ ದಂಗೆ ಎಬ್ಬಿಸಿ ಓಡಿಸುತ್ತೇವೆ ಎಂದು ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಮಾತನ್ನಾಡಿರುವ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ವಿರುದ್ಧ ಎಫ್‌ಐಆರ್ ದಾಖಲಿಸಿ ಕಠಿಣ ಕ್ರಮ ಕೈಗೊಂಡು, ಬಂಸಬೇಕು, ಐವನ್ ಅವರನ್ನು ವಿಧಾನ ಪರಿಷತ್ ಸ್ಥಾನದಿಂದ ತೆರವುಗೊಳಿಸಬೇಕು ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಆಗ್ರಹಿಸಿದೆ.
ಐವನ್ ಡಿಸೋಜ ಪ್ರಚಾರ ಪ್ರಿಯ. ಮೈಕ್ ಸಿಕ್ಕಿದರೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಕಾಂಗ್ರೆಸ್‌ನಲ್ಲಿ ಉಗ್ರಗಾಮಿ ಮನೋಸ್ಥಿತಿ ಇದೆ ಎಂಬುದು ಐವನ್ ಮಾತಿನಿಂದ ಸ್ಪಷ್ಟವಾಗಿದೆ. ಕಾಂಗ್ರೆಸ್‌ನ ಅಜೆಂಡಾ ಅವರ ಬಾಯಿಯಿಂದ ಹೊರಬಂದಿದೆ. ಬಾಂಗ್ಲಾ ಉಗ್ರರ ಮಾದರಿಯಲ್ಲಿ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಕಾಂಗ್ರೆಸ್ ಯೋಜನೆ ಈ ಮೂಲಕ ಬಯಲಾಗಿದೆ. ಐವನ್ ಅವರನ್ನು ಬಂಸದಿದ್ದರೆ ಅವರ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಜೋಯಲ್ ಮೆಂಡೋನ್ಸಾ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಪ್ಪು ಮಾಡಿದ್ದಾರೆಯೇ, ಇಲ್ಲವೇ ಎನ್ನುವುದು ತನಿಖೆಯಿಂದ ತಿಳಿಯಬೇಕಿದೆ. ತನಿಖೆಗೂ ಮುನ್ನವೇ ಕಾಂಗ್ರೆಸ್ ಭಯಭೀತಗೊಂಡಿದೆ. ಐವನ್ ಡಿಸೋಜ ಅವರನ್ನು ಬಂಸಲು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಪೊಲೀಸ್ ಇಲಾಖೆಗೆ ಸೂಚನೆ ನೀಡಬೇಕು. ಆ ಮೂಲಕ ಕಾಂಗ್ರೆಸ್ ಪಕ್ಷ ಸಂವಿಧಾನಕ್ಕೆ ಗೌರವ ನೀಡುತ್ತದೆ ಎಂಬುದನ್ನು ಸಾಬೀತುಪಡಿಸಬೇಕು ಎಂದರು.
*ಅಲ್ಪಸಂಖ್ಯಾತ ಮೋರ್ಚಾದಿಂದ ಐವನ್ ವಿರುದ್ಧ ದೂರು
ಸೋಮವಾರ ನಡೆದ ಕಾಂಗ್ರೆಸ್‌ನ ಪ್ರತಿಭಟನೆ ವೇಳೆ ಬಸ್ ಕಲ್ಲು ತೂರಾಟ ನಡೆಸಿದ ಮೂವರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಆದರೆ, ಘಟನೆಗೆ ಪ್ರಚೋದನೆ ನೀಡಿದ ಐವನ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಲ್ಲ. ಈ ಮೂಲಕ ಕಾಂಗ್ರೆಸ್ ಪಕ್ಷ ಹಾಗೂ ಪೊಲೀಸ್ ಇಲಾಖೆ ತಾರತಮ್ಯ ಎಸಗಿದೆ. ಐವನ್ ಡಿಸೋಜ ವಿರುದ್ಧ ಬರ್ಕೆ ಠಾಣೆಯಲ್ಲಿ ದೂರು ನೀಡಲಿದ್ದೇವೆ ಎಂದು ಜೋಯಲ್ ಮೆಂಡೋನ್ಸಾ ಹೇಳಿದರು.
ಅಲ್ಪಸಂಖ್ಯಾತರ ರಕ್ಷಣೆಯ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ, ಪ್ರತಿಭಟನೆ ವೇಳೆ ಅಲ್ಪಸಂಖ್ಯಾತ ಕಾರ್ಯಕರ್ತರಿಂದ ಅಲ್ಪಸಂಖ್ಯಾತ ವ್ಯಕ್ತಿಗೆ ಸೇರಿದ ಬಸ್‌ಗೆ ಕಲ್ಲು ತೂರಾಟ ನಡೆಸಲು ಪ್ರೇರಣೆ ನೀಡಿದೆ. ಐವನ್ ಡಿಸೋಜ ಅವರು ಉದ್ದೇಶಪೂರ್ವಕವಾಗಿ ಬಸ್‌ಗೆ ಕಲ್ಲು ಹೊಡೆಸಿದ್ದಾರೆ ಎಂದು ಜೋಯಲ್ ಮೆಂಡೋನ್ಸಾ ಆರೋಪಿಸಿದರು.
ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಟಿ.ಎ. ಶನವಾಜ್, ಬಿಜೆಪಿ ಜಿಲ್ಲಾ ವಕ್ತಾರ ಅರುಣ್ ಶೇಟ್, ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಕಾರ್ಯದರ್ಶಿ ಜೆಸ್ಸೆಲ್ ಡಿಸೋಜ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫ್ರೆಡ್ರಿಕ್ ಪೌಲ್, ಪ್ರಮುಖರಾದ ಸಿರಾಜ್ ಮುಡಿಪು, ಎ.ಕೆ. ಜಮಾಲ್, ವಿಲ್ರೆಡ್ ಸಲ್ದಾನಾ, ಟೀನಾ ಉಪಸ್ಥಿತರಿದ್ದರು.