ಜಿಲ್ಲೆ

ಸಚಿವ ಜಮೀರ್ ಅಹ್ಮದ್ ಉಚ್ಛಾಟಿಸಲು ಆಗ್ರಹ

ಸಿದ್ದಾಪುರ: ರೈತರ ಜಮೀನನ್ನು ವಕ್ಪ್ ಬೋರ್ಡ್ ಕಬಳಿಸುತ್ತಿದ್ದು, ಇದಕ್ಕೆ ರಾಜ್ಯ ಸರ್ಕಾರ ಹಾಗೂ ಸಚಿವ ಜಮೀರ್ ಅಹ್ಮದ್ ಕುಮಕ್ಕು ನೀಡುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಕಬಳಿಕೆ ಆದ ಜಮೀನನ್ನು ರೈತರಿಗೆ ಮರಳಿಸುವಂತೆ ಈ ಕೂಡಲೇ ಆದೇಶ ಹೊರಡಿಸಬೇಕು ಎಂದು ತಾಲೂಕು ಬಿಜೆಪಿ ಮಂಡಲ ಸಿದ್ದಾಪುರದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಿದರು.

ಸಚಿವ ಜಮೀರ್ ಅಹ್ಮದ್ ಅವರನ್ನು ಸಚಿವ ಸ್ಥಾನದಿಂದ ಕೂಡಲೇ ಉಚ್ಛಾಟಿಸಬೇಕು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಜನರ ಕ್ಷಮೆ ಕೇಳಬೇಕು ಮತ್ತು ಸ್ಪಷ್ಟನೆ ನೀಡಬೇಕು. ಇನ್ನು ಮುಂದೆ ಯಾವುದೇ ವಕ್ಪ್ ಅದಾಲತ್ ನಡೆಸದಂತೆ ಸರ್ಕಾರ ಆದೇಶ ಹೊರಡಿಸಬೇಕು, ಇದಕ್ಕೆ ಸಂಬಂಧಿಸಿದ ಗೆಜೆಟ್ ನೋಟಿಫಿಕೇಶನ್ ಹಿಂಪಡೆಯಬೇಕು. ಕೇಂದ್ರ ಸರ್ಕಾರ ತರುತ್ತಿರುವ ವಕ್ಪ್ ತಿದ್ದುಪಡಿ ಕಾಯ್ದೆಗೆ ರಾಜ್ಯ ಸರ್ಕಾರ ಮುಂದಿನ ಅಧಿವೇಶನದಲ್ಲಿ ಒಮ್ಮತದ ನಿರ್ಣಯ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳಿಸಿ ಕೊಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಎಂ.ಕೆ ತಿಮ್ಮಪ್ಪ, ಜಿಲ್ಲಾ ವಿಶೇಷ ಆಹ್ವಾನಿತ ಗುರುರಾಜ ಶಾನಭಾಗ, ಕೃಷ್ಣಮೂರ್ತಿ ಕಡಕೇರಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಜಿ. ನಾಯ್ಕ ಹಣಜಿಬೈಲ್ ಎಸ್​ಸಿ ಮೋರ್ಚಾದ ಜಿಲ್ಲಾಧ್ಯಕ್ಷ ನಂದನ ಬೋರ್ಕರ್, ಇತರರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗ್ರೇಡ್-2 ತಹಸೀಲ್ದಾರ್ ಜಿ. ಶಾಮಸುಂದರ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಮಂಡಲ ಪ್ರಧಾನ ಕಾರ್ಯದರ್ಶಿ ತೋಟಪ್ಪ ನಾಯ್ಕ, ಎಸ್.ಕೆ. ಮೇಸ್ತ, ಪಪಂ ಅಧ್ಯಕ್ಷೆ ಚಂದ್ರಕಲಾ ನಾಯ್ಕ, ಪ್ರಮುಖರಾದ ದಯಾನಂದ ಕಡಕೇರಿ, ಕೃಷ್ಣ್ಣುೂರ್ತಿ ಐಸೂರು, ಮಾರುತಿ ನಾಯ್ಕ ಹೊಸೂರು, ಪಪಂ ಉಪಾಧ್ಯಕ್ಷ ವಿನಯ ಹೊನ್ನೆಗುಂಡಿ, ಸ್ಥಾಯಿ ಸಮಿತಿ ಅಧ್ಯಕ್ಷ ವಿಜೇಂದ್ರ ಗೌಡರ್, ಮಂಜುನಾಥ ಭಟ್ಟ, ಸುಮನಾ ಕಾಮತ, ಯಶೋಧಾ ಮಡಿವಾಳ, ಸುರೇಶ ನಾಯ್ಕ, ವಿಜೇತ ಗೌಡರ್, ಪ್ರಸನ್ನ ಹೆಗಡೆ, ಲೋಕೇಶ ನಾಯ್ಕ, ಇತರರಿದ್ದರು.