ಜಿಲ್ಲೆ

ನೃಪತುಂಗ ಬೆಟ್ಟ ಅಭಿವೃದ್ಧಿಗೆ ಆಗ್ರಹ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ನೈಸರ್ಗಿಕ ಹಾಗೂ ಸಹಜ ಸೌಂದರ್ಯ ಹೊಂದಿರುವ ಇಲ್ಲಿನ ನೃಪತುಂಗ ಬೆಟ್ಟದ ಸರ್ವಾಂಗೀಣ ಅಭಿವೃದ್ಧಿಗೆ ಅನುದಾನ ಒದಗಿಸುವಂತೆ ಆಗ್ರಹಿಸಿ ನೃಪತುಂಗ ಬೆಟ್ಟ ವಾಯು ವಿಹಾರಿಗಳ ಸಂಘದ ವತಿಯಿಂದ ನಗರದಲ್ಲಿ ಮಂಗಳವಾರದಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು.

ಸಂಘದ ಗೌರವಾಧ್ಯಕ್ಷ ಡಾ. ಗೋವಿಂದ ಮಣ್ಣೂರ, ಹಿರಿಯ ಉಪಾಧ್ಯಕ್ಷ ಶಿವಣ್ಣ ಅಂಗಡಿ ಹಾಗೂ ಪ್ರಧಾನ ಕಾರ್ಯದರ್ಶಿ ಸಿದ್ದು ಮೊಗಲಿಶೆಟ್ಟರ ಅವರು ಸಚಿವರಿಗೆ ಮನವಿ ಸಲ್ಲಿಸಿ, ನೃಪತುಂಗ ಬೆಟ್ಟವನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ಮಾಡಿ, ಕರ್ನಾಟಕದ ಮೂಲೆ ಮೂಲೆಗಳಿಂದ ಪ್ರವಾಸಿಗರು ಬಂದು ವೀಕ್ಷಣೆ ಮಾಡುವಂತೆ ಮಾರ್ಪಾಡು ಮಾಡಲು ಸುಮಾರು 10 ಕೋಟಿ ರೂ. ಅನುದಾನ ಒದಗಿಸಬೇಕು ಎಂದು ಆಗ್ರಹಿಸಿದರು.

ಮೂಲ ಸೌಕರ್ಯಗಳನ್ನು ಒಳಗೊಂಡು, ಬೆಟ್ಟದ ವಿ ಪಾಯಿಂಟ್​ನಿಂದ ಉಣಕಲ್ಲ ಕೆರೆಯವರೆಗೆ ರೋಪ್ ವೇ ನಿರ್ಮಾಣ ಹಾಗೂ ಜಿಪ್​ಲೈನ್ ಅಳವಡಿಕೆ, ಪ್ರತಿ ವಾರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕನ್ನಡ ಮತ್ತು ಸಂಸ್ಕೃತ ಇಲಾಖೆಯಿಂದ ಆಯೋಜಿಸುವುದು, ಮುಂಭಾಗದಲ್ಲಿ ದ್ವಾರ ಬಾಗಿಲು ಕಮಾನು ನಿರ್ವಣ, ಬೆಟ್ಟದ ಮೇಲತುದಿಯಲ್ಲಿ ಬೈನಾಕೂಲರ್ ಅಳವಡಿಸುವುದು ಸೇರಿ ವಿವಿಧ ಸೌಲಭ್ಯ ಒದಗಿಸುವಂತೆ ಮನವಿ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ, ಮುಂದಿನ ಹುಬ್ಬಳ್ಳಿ ಪ್ರವಾಸದ ಸಂದರ್ಭದಲ್ಲಿ ನೃಪತುಂಗ ಬೆಟ್ಟಕ್ಕೆ ಒಂದು ತಾಸಿನ ಭೇಟಿಯನ್ನು ನೀಡುವುದಾಗಿ ತಿಳಿಸಿದರು. ಬೆಟ್ಟ ವೀಕ್ಷಿಸಿ, ಅಗತ್ಯ ಅನುದಾನ ಒದಗಿಸುವ ಬಗ್ಗೆ ಭರವಸೆ ನೀಡಿದರು.