ಜಿಲ್ಲೆ

ಟಿಟಿಡಿಯಿಂದ ನಂದಿನಿ ತುಪ್ಪಕ್ಕೆ ಬೇಡಿಕೆ

Demand for Nandini ghee from TTD

ಕೋಲಾರ ಡೆಸ್ಕ್


ಕೋಚಿಮುಲ್​ ನಿರ್ದೇಶಕ ಜಯಸಿಂಹ ಕೃಷ್ಣಪ್ಪ ಹೇಳಿಕೆ, ರಾಜ್ಯದ ಮುಜರಾಯಿ ದೇಗುಲಗಳಿಗೂ ಸರಬರಾಜು

ಬಂಗಾರಪೇಟೆ:ನಾಡಿನ ನಂದಿನಿ ತುಪ್ಪಕ್ಕೆ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿಯಿಂದ ಬೇಡಿಕೆ ಬಂದಿದ್ದು, ಲಡ್ಡು ತಯಾರಿಕೆ ಸೇರಿ ದೇವಾಲಯದ ಇತರ ಕಾರ್ಯಗಳಿಗೂ ನಂದಿನಿ ತುಪ್ಪ ಸರಬರಾಜು ಮಾಡಲಾಗುತ್ತಿದೆ ಎಂದು ಕೋಚಿಮುಲ್​ ನಿರ್ದೇಶಕ ಜಯಸಿಂಹ ಕೃಷ್ಣಪ್ಪ ಹೇಳಿದರು. ಬಂಗಾರಪೇಟೆ ತಾಲೂಕು ನಾಯಕರಹಳ್ಳಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನಾಯಕರಹಳ್ಳಿ ಮತ್ತು ವೇಣುಗೋಪಾಲಪುರ ಗ್ರಾಮಗಳ ಡೇರಿ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿದರು.


ಈ ಹಿಂದೆ ತಿರುಮಲ ತಿರುಪತಿಗೆ ಪೂರೈಕೆ ಮಾಡಲಾಗುತ್ತಿದ್ದ ಕಂಪನಿಯ ತುಪ್ಪವನ್ನು ಸ್ಥಗಿತಗೊಳಿಸಿ, ನಂದಿನಿ ತುಪ್ಪ ಸರಬರಾಜು ಮಾಡಲು ಟಿಟಿಡಿಯು ಮನವಿ ಮಾಡಿದೆ. ಜತೆಗೆ ರಾಜ್ಯದ ಮುಜರಾಯಿ ದೇವಾಲಯಗಳಲ್ಲಿ ಲಡ್ಡು ತಯಾರಿಕೆ ಸೇರಿ ಇತರ ದೇವರ ಕಾರ್ಯಗಳಿಗೆ ನಂದಿನಿ ತುಪ್ಪ ಸರಬರಾಜು ಮಾಡಲು ಮುಜರಾಯಿ ಇಲಾಖೆ ಮನವಿ ಮಾಡಿರುವ ಕಾರಣ ನಂದಿನಿ ತುಪ್ಪ ಮತ್ತು ಬೆಣ್ಣೆಗೆ ಬೇಡಿಕೆ ಹೆಚ್ಚಾಗಿದೆ. ಅಕ್ಷರ ದಾಸೋಹಕ್ಕೂ ನಂದಿನಿ ತುಪ್ಪ ಬಳಸುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಗ್ರಾಹಕರಿಗೆ ನಂದಿನಿ ತುಪ್ಪದ ಮೇಲಿನ ವಿಶ್ವಾಸ ಹಾಗೂ ಬೇಡಿಕೆ ಹೆಚ್ಚಾಗಿದೆ ಎಂದರು.
ಹಲವು ವರ್ಷಗಳಿಂದ ಕೋಲಾರ ಒಕ್ಕೂಟದಲ್ಲಿ ತಯಾರಾಗುತ್ತಿದ್ದ ತುಪ್ಪವನ್ನು ತಿರುಪತಿ ದೇವಸ್ಥಾನಕ್ಕೆ ಟನ್​ಗಟ್ಟಲೆ ಪೂರೈಕೆ ಮಾಡಲಾಗುತ್ತಿತ್ತು. ಆದರೆ ಬೆಲೆಯಲ್ಲಿ ಸಮಸ್ಯೆ ಉಂಟಾಗಿ ನಾಲ್ಕು ವರ್ಷಗಳಿಂದ ದೇವಸ್ಥಾನಕ್ಕೆ ತುಪ್ಪ ಪೂರೈಕೆ ನಿಲ್ಲಿಸಲಾಗಿತ್ತು ಎಂದರು.


ಈಗ ಲಡ್ಡು ತಯಾರಿಕೆಯಲ್ಲಿ ಕಲಬೆರೆಕೆ ತುಪ್ಪ ಬಳಸಲಾಗುತ್ತಿದೆ ಎಂಬುದನ್ನು ಅರಿತ ಟಿಟಿಡಿ ಮತ್ತೆ ಕರ್ನಾಟಕ ಹಾಲು ಒಕ್ಕೂಟದ ಕೆಎಂಎಫ್​ನೊಂದಿಗೆ ಒಪ್ಪಂದ ಮಾಡಿಕೊಂಡು ಪ್ರತಿ ತಿಂಗಳು 4000 ಟನ್​ ತುಪ್ಪ ಕಳಿಸುವಂತೆ ಒಪ್ಪಂದ ಮಾಡಿಕೊಂಡಿದೆ. ಇದರ ಪೈಕಿ ಶೇ.30 ತುಪ್ಪ ಕೋಲಾರ ಹಾಲು ಒಕ್ಕೂಟವೇ ಕಳುಹಿಸುತ್ತಿದೆ. ದೇಶ ಕಾಯುವ ಯೋಧರಿಗೂ ಹಾಲನ್ನು ಸರಬರಾಜು ಮಾಡುತ್ತಿರುವ ಕಾರಣ ಹಾಲು ಉತ್ಪಾದಕರು ಡೇರಿಗೆ ಕಲಬೆರೆಕೆ ಇಲ್ಲದ ಗುಣಮಟ್ಟದ ಹಾಲನ್ನು ಪೂರೈಕೆ ಮಾಡಬೇಕು ಎಂದರು.


ಒಕ್ಕೂಟಕ್ಕೆ ನಿತ್ಯ 12 ಲಕ್ಷ ಲೀಟರ್​ ಹಾಲನ್ನು ಪೂರೈಕೆ ಮಾಡಲಾಗುತ್ತಿದ್ದು,1,600 ಕೋಟಿ ರೂ. ಮೌಲ್ಯದ ಹಾಲಿನ ಪುಡಿ, ತುಪ್ಪ ಸೇರಿ ಇತ್ಯಾದಿಗಳು ಗೋದಾಮಿನಲ್ಲಿ ಇಡಲಾಗಿದೆ. ಮುಂದಿನ ದಿನಗಳಲ್ಲಿ ದುಬೈ ಸೇರಿ ಇತರ ದೇಶಗಳಿಗೆ ಸರಬರಾಜು ಮಾಡಿ ದಾಸ್ತಾನು ಖಾಲಿ ಮಾಡಲಾಗುತ್ತದೆ. ಇದರಿಂದ ಇನ್ನಷ್ಟು ಲಾಭಾಂಶ ಒಕ್ಕೂಟಕ್ಕೆ ಬರಲಿದೆ ಎಂದರು.


ಸಂಘದ ಅಧ್ಯಕ್ಷ ಜಿ.ನಾರಾಯಣಸ್ವಾಮಿ ಮಾತನಾಡಿ, ಬಂಗಾರಪೇಟೆ ಕ್ಷೀರ ಭವನವು ತಾಲೂಕಿಗೆ ಕಿರೀಟವಿದ್ದಂತೆ, ಹಾಲು ಉತ್ಪಾದಕರ ಸಹಕಾರದಿಂದ ಸಂಘಗಳು ಆದಾಯದ ಜತೆಗೆ ಅಭಿವೃದ್ಧಿ ಕಾಣುತ್ತಿದೆ. ಅದರ ಫಲವಾಗಿ ಸಂಘಗಳಿಗೆ ಉತ್ತಮ ಆದಾಯವೂ ಬರುತ್ತಿದೆ. ಗುಣಮಟ್ಟದ ಹಾಲನ್ನು ಪೂರೈಕೆ ಮಾಡುವ ಮೂಲಕ ಉತ್ಪಾದಕರು ಇನ್ನಷ್ಟು ಆದಾಯ ಗಳಿಸಿ ಸಂಘದ ಅಭಿವೃದ್ಧಿಗೂ ಕೈ ಜೋಡಿಸಬೇಕು ಎಂದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ನಾರಾಯಣಸ್ವಾಮಿ, ಆಡಳಿತ ಮಂಡಳಿಯ ಸದಸ್ಯರಾದ ಸಂಪಂಗಿರಾಮೇಗೌಡ, ಎನ್​.ನಾರಾಯಣಸ್ವಾಮಿ, ಸೊಣ್ಣಪ್ಪ, ರಾಮಕೃಷ್ಣಪ್ಪ, ವಿಜಯಭಾಸ್ಕರ್​, ನಂಜಪ್ಪ, ಚಂದ್ರೇಗೌಡ, ಶ್ಯಾಮಪ್ಪ, ಗುರುಪ್ರಸಾದ್​, ಮುನೆಯ್ಯ, ನರಸಪ್ಪ, ಸೊಣ್ಣಪ್ಪ, ವೆಂಕಟರಾಂ, ವೆಂಕಟೇಶಪ್ಪ, ಅನುಸೂಯಮ್ಮ, ರಾಜಮ್ಮ, ಗುರುಪ್ರಸಾದ್​, ಮುನಿವೀರಪ್ಪ, ಚಲಪತಿ, ಪಾಪಣ್ಣ, ರಾಣಿಯಮ್ಮ, ರತ್ಮಮ್ಮ, ವೆಂಕಟಮ್ಮ ಇದ್ದರು.