ಮಡಿಕೇರಿ: ಹವಾಮಾನದ ವೈಪರಿತ್ಯದಿಂದ ಬೆಳೆಯ ಫಸಲು ನಷ್ಟವಾಗಿ ರೈತರು ಸಂಕಷ್ಟ ಎದುರಿಸುತಿದ್ದು, ರೈತರ ಪರವಾಗಿ ಚೆಟ್ಟಳ್ಳಿ ಸಹಕಾರ ಸಂಘದ ಮೂಲಕ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಸಾಲಮನ್ನಾಕ್ಕೆ ಒತ್ತಾಯಿಸುವುದಾಗಿ ಚೆಟ್ಟಳ್ಳಿ ವಿವಿದ್ಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ ತಿಳಿಸಿದರು.
ಚೆಟ್ಟಳ್ಳಿಯ ವಿಶ್ವಗುರು ನರೇಂದ್ರಮೋದಿ ರೈತರ ಸಹಕಾರಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಂಘದ ೪೬ನೇ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸ್ತುತ ಸಂಘ ೫೩.೪೨ಲಕ್ಷ ಲಾಭಗಳಿಸಿದ್ದು, ಸದಸ್ಯರಿಗೆ ಶೇ.೧೫ಡಿವಿಡೆಂಟ್ ನೀಡಲಾಗುತ್ತಿದೆ. ೩.೫೦ಲಕ್ಷ ಸಾಲ ಮನ್ನಾ ಹಾಗೂ ೩೧ಲಕ್ಷ ಬಡ್ಡಿಮನ್ನಾದ ಹಣವು ಬಂದರೆ ಸಂಘವು ಇನ್ನಷ್ಟು ಲಾಭಗಳಿಸಲಿದೆ ಎಂದರು.
ಸಂಘದಲ್ಲಿ ಕುಡಿಯುವ ನೀರಿನ ಘಟಕ, ವಸತಿಗ್ರಹ, ವಿವಿಧ ರೀತಿಯ ಸಾಲ ಸೌಲಭ್ಯಗಳು, ಗೊಬ್ಬರಮಾರಾಟ, ಆರ್‌ಟಿಸಿ, ಛಾಪಾಕಾಗದ ಸೌಲಭ್ಯಗಳಿವೆ. ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ನೂತನ ಎಲೆಕ್ಟ್ರಿಕ್ ವಾಹನ ಚಾರ್ಜಿಂಜ್ ಪಾಯಿಂಟ್, ಸಂಘದ ಹಿಂಬದಿಯ ಜಾಗದಲ್ಲಿ ಬಡವರಿಗೆ ಅನುಕೂಲವಾಗುವ ಡಯಾಲಿಸ್ ಕೇಂದ್ರ ಹಾಗೂ ನೆಮ್ಮದಿ ಕೇಂದ್ರದ ಸೌಲಭ್ಯವನ್ನು ಚೆಟ್ಟಳ್ಳಿ ಸಹಕಾರ ಸಂಘ ಮಾಡಲಿದೆ ಎಂದು ತಿಳಿಸಿದರು.
ಚೆಟ್ಟಳ್ಳಿ ವ್ಯಾಪ್ತಿಯ ದೇವಾಲಯದ ಅಭಿವೃದ್ಧಿ, ಕೊಡವ ಹಾಗೂ ಗೌಡಸಮಾಜ ಕುಟುಂಬದ ಕೈಮಡಗಳ ಅಭಿವೃದ್ಧಿಗೆ ಚೆಟ್ಟಳಿ ಸಹಕಾರ ಸಂಘದಿಂದ ತಲಾ ೫೦ ಸಾವಿರ ದೇಣಿಗೆ ನೀಡುವುದು. ಯಾವುದೇ ಜಾತಿಧರ್ಮವಿಲ್ಲದೆ ಸಾಮರಸ್ಯದಿಂದ ಹಿರಿಯ, ಕಿರಿಯ ಸಹಕಾರಿಗಳ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಹಾಗೂ ಸಿಬ್ಬಂದಿಗಳ ಸಹಕಾರದಿಂದ ಚೆಟ್ಟಳ್ಳಿ ಸಹಕಾರ ಸಂಘ ಅಭಿವೃದ್ಧಿಯತ್ತ ಸಾಗಲು ಸಾಧ್ಯವಾಯಿತು ಎಂದು ಮಣಿಉತ್ತಪ್ಪ ತಿಳಿಸಿದರು.
ಸಂಘದ ಜಾಗದ ದಾಖಲೆ ಸಿದ್ಧ: ಕಳೆದ ಮೂವತ್ತು ವರ್ಷಗಳಿಂದ ಚೆಟ್ಟಳ್ಳಿ ಸಹಕಾರ ಸಂಘದ ಮುಖ್ಯಕಚೇರಿಯ ಜಾಗವು ಜಾಗ ನೀಡಿದವರ ಹೇಸರಿನಲಿದ್ದು ಸಂಘದ ಹೆಸರಿಗೆ ಬಂದಿರಲಿಲ್ಲ. ಆದರೆ, ಹಲವು ವರ್ಷಗಳ ಪರಿಶ್ರಮದ ಫಲವಾಗಿ ಸಂಘದ ಹೆಸರಿಗೆ ೧೦ ಸೆಂಟು ಜಾಗದ ದಾಖಲೆ ಮಾಡಲಾಗಿದೆ ಎಂದು ತಿಳಿಸಿದರು.
ಬೀಳ್ಕೊಡುಗೆ ಹಾಗೂ ಸನ್ಮಾನ: ಸಹಕಾರ ಸಂಘದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನಿವೃತ್ತಿ ಹೊಂದಿ ನಂತರದಲ್ಲಿ ಆಂತರಿಕ ಲೆಕ್ಕಪರಿಶೋಧಕರಾಗಿ ಸೇವೆ ಸಲ್ಲಿಸಿದ ಎಚ್.ಬಿ.ರಮೇಶ್‌ರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ರಾಜ್ಯಪ್ರಶಸ್ತಿ ವಿಜೇತ ಪತ್ರಕರ್ತ ಪುತ್ತರಿರ ಕರುಣ್‌ಕಾಳಯ್ಯ ಹಾಗೂ ಹಿರಿಯ ಸಾಹಿತಿ ಸಂಘದ ಉಪಾಧ್ಯಕ್ಷ ಕಣಜಾಲು ಪೂವಯ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ೭ನೇ ತರಗತಿಯಿಂದ ಪದವಿ ಶಿಕ್ಷಣದವರೆಗೆ ಉತ್ತಮ ಅಂಕಪಡೆದ ಸಂಘದ ಸದಸ್ಯರ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಮಡಿಕೇರಿ ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಚೇರಳಗೌಡ ಸಮಾಜದ ಅಧ್ಯಕ್ಷ ಅಯ್ಯಂಡ್ರ ರಾಘವಯ್ಯ, ಚೆಟ್ಟಳ್ಳಿ ಕೊಡವ ಸಮಾಜದ ನಿರ್ದೇಶಕ ಬಟ್ಟೀರ ಕಾಳಪ್ಪ, ಸಂಘದ ಉಪಾದ್ಯಕ್ಷ ಕಣಜಾಲು ಕೆ.ಪೂವಯ್ಯ, ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಎಸ್.ನಂದಿನಿ ಹಾಗೂ ನಿರ್ದೇಶಕರಿದ್ದರು.