ಜಿಲ್ಲೆ

ಕೊಂಕಣ ರೈಲ್ವೆ ವಿಲೀನಕ್ಕೆ ಹೆಚ್ಚಿದ ಆಗ್ರಹ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಕುಂದಾಪುರ

ಕರ್ನಾಟಕ ಕರಾವಳಿಯ ಪ್ರಮುಖ ರೈಲು ಮಾರ್ಗದ ಆಧುನೀಕರಣ, ಅಭಿವೃದ್ಧಿ ದೃಷ್ಟಿಯಿಂದ ಕೊಂಕಣ ರೈಲ್ವೆ ನಿಗಮವನ್ನು ಭಾರತೀಯ ರೈಲ್ವೆ ಜತೆ ವಿಲೀನಗೊಳಿಸಬೇಕೆಂಬ ಆಗ್ರಹ ಹೆಚ್ಚುತ್ತಿದೆ.

ಕೇಂದ್ರ ಸರ್ಕಾರದ ಶೇ.51, ಕರ್ನಾಟಕದ ಶೇ.15, ಮಹಾರಾಷ್ಟ್ರದ ಶೇ.21, ಗೋವಾ ಮತ್ತು ಕೇರಳ ಶೇ.6 ಪಾಲು ಪಡೆದು ಕೊಂಕಣ ರೈಲ್ವೆ ನಿಗಮ ನಿಯಮಿತ ಸ್ಥಾಪಿಸಿ ಆ ಮೂಲಕ ಮಂಗಳೂರು-ಮುಂಬೈ ರೈಲ್ವೆ ಹಳಿ ನಿರ್ಮಿಸಿ 1998ರಲ್ಲಿ ಲೋಕಾರ್ಪಣೆಗೊಳಿಸಲಾಗಿತ್ತು.

ಯೋಜನೆ ಮುಗಿದ 15 ವರ್ಷಗಳಲ್ಲಿ ಕೊಂಕಣ ರೈಲ್ವೆ ನಿಗಮ ಭಾರತೀಯ ರೈಲ್ವೆ ಜತೆ ವಿಲೀನವಾಗುವುದು ಎಂದಾಗಿತ್ತು. ಆದರೆ 30 ವರ್ಷ ನಂತರವೂ ನಿಗಮ ಆರ್ಥಿಕವಾಗಿ ದುಸ್ಥಿತಿಯಲ್ಲೇ ಇರುವ ಕಾರಣ, ಆಯಾ ರಾಜ್ಯ ಸರ್ಕಾರಗಳು ಯಾವುದೇ ಅನುದಾನವನ್ನು ತಮ್ಮ ಪಾಲಿರುವ ಕಂಪನಿಗೆ ನೀಡದ ಕಾರಣ ಆ ಮಾರ್ಗ ಅಭಿವೃದ್ಧಿ ಕಾಣದೆ ಸಿಂಗಲ್‌ಲೈನ್ ಮಾರ್ಗವಾಗಿಯೇ ಉಳಿದಿದೆ.

ಷೇರು ಬಿಟ್ಟುಕೊಡಲು ಪ್ರಸ್ತಾವನೆ

ಕೊಂಕಣ ರೈಲ್ವೆ ಅಭಿವೃದ್ಧಿಯಾಗಬೇಕಾದರೆ ಭಾರತೀಯ ರೈಲ್ವೆ ಇಲಾಖೆಯೊಂದಿಗೆ ವಿಲೀನವಾಗಬೇಕೆಂಬ ಒತ್ತಡ ಹೆಚ್ಚಿದೆ. ಕೊಂಕಣ ರೈಲ್ವೆ ನಿಗಮದಲ್ಲಿ ಕರ್ನಾಟಕ ಈವರೆಗೆ ಶೇ.11.62ರಷ್ಟು ಈಕ್ವಿಟಿ ಪಾಲು ಹೊಂದಿದೆ. ನಿಗಮಕ್ಕೆ ಮುಂದಿನ 15 ವರ್ಷಗಳಿಗೆ 9,158.09 ಕೋಟಿ ರೂ. ಕಾಮಗಾರಿ ಕೈಗೊಳ್ಳುವ ಅಗತ್ಯವಿದೆ. ಇಷ್ಟು ಮೊತ್ತ ಹೂಡಿಕೆ ಮಾಡಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗದಿದ್ದಲ್ಲಿ ಷೇರುಗಳನ್ನು ರೈಲ್ವೆ ಮಂತ್ರಾಲಯಕ್ಕೆ ಬಿಟ್ಟುಕೊಡುವ ಕುರಿತು ಪರಿಶೀಲಿಸಬಹುದು. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಬೆಳಗಾವಿ ಅಧಿವೇಶನದಲ್ಲಿ ನಿಯಮ 73ರ ಅಡಿಯಲ್ಲಿ ಕೊಂಕಣ ರೈಲ್ವೆ ವಿಲೀನ ಕುರಿತಂತೆ ಮಾಡಿದ ಪ್ರಸ್ತಾಪ ಕರಾವಳಿ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ ಈ ಬಗ್ಗೆ ಕೇಂದ್ರ ರೈಲ್ವೆ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಕ್ರಮ ಕೈಗೊಳ್ಳುವ ಭರವಸೆ ದೊರೆತಿದೆ. ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆ ಜತೆ ವಿಲೀನಗೊಳಸಬೇಕೆಂಬ ಆಗ್ರಹ ಬಲವಾಗುತ್ತಿದೆ.

ಕೇಂದ್ರದ ಒಪ್ಪಿಗೆ

ಕರ್ನಾಟಕ ಕರಾವಳಿಯ ಈ ಪ್ರಮುಖ ರೈಲು ಮಾರ್ಗದ ಆಧುನೀಕರಣಕ್ಕೆ ಕೇಂದ್ರ ಸರ್ಕಾರವೇ ಒಪ್ಪಿಗೆ ನೀಡಿದೆ. ಗೋವಾ ಸರ್ಕಾರ ಭಾರತೀಯ ರೈಲ್ವೆಗೆ ಹಸ್ತಾಂತರಿಸಲು ಒಪ್ಪುವ ಮೂಲಕ ತನ್ನ ರಾಜ್ಯದ ರೈಲ್ವೆ ಅಭಿವೃದ್ಧಿಗೆ ಭಾರತ ಸರ್ಕಾರದ ಬಜೆಟ್ ಹಣ ಪಡೆದು ಆಧುನೀಕರಣದತ್ತ ಹೆಜ್ಜೆ ಹಾಕಿದೆ. ಮಹಾರಾಷ್ಟ್ರ ಸರ್ಕಾರ ಈ ಬಗ್ಗೆ ಒಪ್ಪಿಗೆ ನೀಡಲು ಚಿಂತಿಸಿದೆ. ಕರ್ನಾಟಕ ಸರ್ಕಾರ ಇದಕ್ಕೆ ಪೂರಕವಾಗಿ ನಿಂತಲ್ಲಿ ಕೊಂಕಣ ರೈಲ್ವೆ ವಿಲೀನ ಸುಲಭವಾಗಲಿದೆ.

ರಾಜ್ಯದ ರೈಲ್ವೆ ಅಭಿವೃದ್ಧಿ, ಡಬ್ಲಿಂಗ್ ಸೇರಿದಂತೆ ಇತರ ಕಾರ್ಯಗಳಿಗೆ ಪಾಲುದಾರನಾಗಿ ಸಾವಿರಾರು ಕೋಟಿ ರೂ. ಹೂಡಿಕೆ ಮಾಡುವ ಒತ್ತಡದಿಂದ ಪಾರಾಗಲು ಕರ್ನಾಟಕ ಸರ್ಕಾರ ಕೊಂಕಣದ ಇತರ ರಾಜ್ಯಗಳ ಮಾದರಿಯಲ್ಲಿ ಭಾರತೀಯ ರೈಲ್ವೆಗೆ ತನ್ನ ಪಾಲಿನ ಷೇರು ಹಸ್ತಾಂತರ ಮಾಡಿದಲ್ಲಿ ವಿಲೀನ ಪ್ರಕ್ರಿಯೆ ಸುಲಭವಾಗಲಿದೆ. ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಂಡಲ್ಲಿ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. -ಕಿರಣ್ ಕುಮಾರ್ ಕೊಡ್ಗಿ, ಕುಂದಾಪುರ ಶಾಸಕ ಕೊಂಕಣ ರೈಲ್ವೆ ನಿಗಮದ 2ನೇ ಅತಿ ದೊಡ್ಡ ಆಡಳಿತ ಪಾಲುದಾರನಾಗಿರುವ ಕರ್ನಾಟಕ ಸರ್ಕಾರ ಕೊಂಕಣ ರೈಲ್ವೆ ಡಬ್ಲಿಂಗ್ ಮಾಡಲು ತನ್ನ ಪಾಲಿನ ಹಣಕಾಸು ನೆರವು ನೀಡಲು ಒಪ್ಪದ ಕಾರಣ ಡಬ್ಲಿಂಗ್ ಯೋಜನೆ ರದ್ದಾಗಿದೆ. ಸ್ಟೇಷನ್, ಟರ್ಮಿನಲ್ ಸೌಲಭ್ಯಗಳಿಗಾಗಿ ಹಣಕಾಸಿನ ನೆರವು ಬೇಕಾಗಿದ್ದು, ಕೇವಲ ಭಾರತೀಯ ರೈಲ್ವೆ ಮಾತ್ರ ತನ್ನ ಪಾಲಿನ ಹಣ ಬಿಡುಗಡೆ ಮಾಡುತ್ತಿದೆ. ಕರ್ನಾಟಕ ಸರ್ಕಾರ ಯಾವುದೇ ಅಗತ್ಯ ಸೌಲಭ್ಯಗಳಿಗೆ ಹಣಕಾಸು ನೆರವು ನೀಡುತ್ತಿಲ್ಲ. ತನ್ನ ಪಾಲಿನ ಮೂಲ ಬಂಡವಾಳವನ್ನು ಕೇಂದ್ರಕ್ಕೆ ನೀಡಿ ಕೈತೊಳೆದುಕೊಂಡರೆ ಕೊಂಕಣ ರೈಲ್ವೆ ಭಾರತೀಯ ರೈಲ್ವೆ ಜತೆ ವಿಲೀನವಾಗಲಿದೆ. -ಗಣೇಶ ಪುತ್ರನ್, ರೈಲ್ವೆ ಪ್ರಯಾಣಿಕರ ಹಿತರಕ್ಷಣಾ ಸಮಿತಿ https://www.vijayavani.net/two-awards-for-amrita-bharti-papu-college https://www.vijayavani.net/social-worker-ganapathy-t-sriyan-felicitated