ಜಿಲ್ಲೆ

ಕೊಡವ ಲ್ಯಾಂಡ್ ಬೇಡಿಕೆ ಪ್ರಣಾಳಿಕೆಯಲ್ಲಿ ಸೇರಿಸಲು ಒತ್ತಾಯ

ಮಡಿಕೇರಿ: ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಸ್ವಯಂ ನಿರ್ಣಯ ಹಾಗೂ ಎಸ್‌ಟಿ ಟ್ಯಾಗ್ ಕುರಿತು ಎರಡು ರಾಷ್ಟ್ರೀಯ ರಾಜಕೀಯ ಪಕ್ಷಗಳ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳು ಪ್ರಣಾಳಿಕೆಯಲ್ಲಿ ಭರವಸೆ ನೀಡುವ ಮೂಲಕ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ.


ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೊಡವ ಕುಲ ಸಮಸ್ಯೆಗೆ ಸಂಬಂಧಿಸಿದ ೧೦ ನ್ಯಾಯಸಮ್ಮತ ಬೇಡಿಕೆಗಳನ್ನು ಮುಂದಿಟ್ಟು ಕಳೆದ ೩೪ ವರ್ಷಗಳಿಂದ ಶಾಂತಿಯುತ ಹೋರಾಟ ನಡೆಸುತ್ತಾ ಬಂದಿದೆ. ಇಲ್ಲಿಯವರೆಗೆ ಈಡೇರದ ಈ ಬೇಡಿಕೆಗಳ ಕುರಿತು ಅಭ್ಯರ್ಥಿಗಳು ತಮ್ಮ ಬದ್ಧತೆಯನ್ನು ಶುದ್ಧ ಅಂತ:ಕರಣದಿಂದ ಪ್ರದರ್ಶಿಸಬೇಕು ಎಂದು ತಿಳಿಸಿದ್ದಾರೆ.


ಕೊಡವ ಗುರುತು ಮತ್ತು ಕೊಡವಲ್ಯಾಂಡ್‌ಗೆ ಅಸ್ತಿತ್ವದ ಅಭದ್ರತೆ ಕಾಡುತ್ತಿದೆ. ಆದ್ದರಿಂದ ಸಿಎನ್‌ಸಿಯ ಬೇಡಿಕೆಗಳನ್ನು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಪ್ರಮುಖ ಪಕ್ಷಗಳ ಇಬ್ಬರು ಅಭ್ಯರ್ಥಿಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ನಾಚಪ್ಪ ಒತ್ತಾಯಿಸಿದ್ದಾರೆ.