ಅರಸೀಕೆರೆ: ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಹಾಸನ ರಸ್ತೆ ಬಡಾವಣೆಗೆ ಬೀದಿ ದೀಪ ಸಂಪರ್ಕ ಕಲ್ಪಿಸುವಂತೆ ನಗರ ಯೋಜನಾ ಪ್ರಾಧಿಕಾರದ ಮಾಜಿ ಸದಸ್ಯ ಶಿವನ್‌ರಾಜ್ ಒತ್ತಾಯಿಸಿದರು.
ನಗರಸಭೆ ಕಚೇರಿ ಆವರಣದಲ್ಲಿ ಗುರುವಾರ ಪೌರಾಯುಕ್ತ ಎಚ್.ಟಿ.ಕೃಷ್ಣ ಮೂರ್ತಿಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದರು. ಹಾಸನ-ಮೈಸೂರು ಸಂಪರ್ಕಿಸುವ ಮುಖ್ಯ ರಸ್ತೆಗೆ ಹೊಂದಿಕೊಂಡಂತಿರುವ ಎಸ್‌ಎಸ್ ನಸಿರ್ಂಗ್ ಹೋಂನಿಂದ ರೈಲ್ವೆ ಕೆಳಸೇತುವೆ ಮಾರ್ಗವಾಗಿ ಹಾಸನ ರಸ್ತೆ ಬಡಾವಣೆಗಳವರೆಗೆ ಬೀದಿದೀಪ ಅಳವಡಿಸಿಲ್ಲ. ಇದರಿಂದಾಗಿ ವಯೋವೃದ್ಧರಿಗೆ ರಾತ್ರಿ ವೇಳೆ ಓಡಾಡಲು ಸಂಕಷ್ಟ ಎದುರಿಸುವಂತಾಗಿದೆ. ಜನ ಸಂಚಾರ ಇಲ್ಲದ ಕಡೆ ಇಪ್ಪತ್ತೈದು ಲಕ್ಷ ರೂ. ವೆಚ್ಚದಲ್ಲಿ ಬೀದಿ ದೀಪ ಅಳವಡಿಸಲು ಯೋಜನೆ ರೂಪಿಸಲಾಗಿದೆ. ಆದರೆ ಜನನಿಬಿಡ ಮಾರ್ಗ ಕಡೆಗಣಿಸಿರುವುದು ಸರಿಯಲ್ಲ. ಬೀದಿದೀಪ ಅಳವಡಿಸುವ ಉದ್ದೇಶಿತ ಮಾರ್ಗದಲ್ಲಿ ಡೆಕ್ ಸ್ಲಾೃಬ್ ತುಂಡಾಗಿ ಬಿದ್ದಿದ್ದು, ಕತ್ತಲಲ್ಲಿ ಚರಂಡಿಗೆ ಬಿದ್ದು ಆಸ್ಪತ್ರೆಗೆ ಸೇರುವ ಸ್ಥಿತಿ ನಿರ್ಮಾಣಗೊಂಡಿದೆ ಎಂದು ಆತಂಕ ವ್ಯಕ್ತಪಡಿಸಿದರು.
ನಗರಸಭೆ ಆಡಳಿತ ವಾಸ್ತವ ಮನಗಂಡು ತಕ್ಷಣವೇ ಸಮಸ್ಯೆ ಪರಿಹರಿಸಬೇಕು. ಈ ನಿಟ್ಟಿನಲ್ಲಿ ಪೌರಾಯುಕ್ತರನ್ನು ಭೇಟಿ ಮಾಡಿ ಮನವಿ ಮಾಡಿದ್ದೇವೆ. ಸಕಾರಾತ್ಮಕ ಸ್ಪಂದನೆ ದೊರೆಯದಿದ್ದರೆ ಹೋರಾಟ ನಡೆಸಲು ಹಿಂದೇಟು ಹಾಕುವುದಿಲ್ಲ ಎಂದ ಹೇಳಿದರು. ಆರೋಗ್ಯ ನಿರೀಕ್ಷಕ ಲಿಂಗರಾಜು ಇದ್ದರು.