ಜಿಲ್ಲೆ

ಸದಾಶಿವ ಆಯೋಗ ವರದಿ ಜಾರಿಗೆ ಒತ್ತಾಯ

ಮಾದೇಶ್ ತಿ.ನರಸೀಪುರ

ಸರಗೂರು: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸದಾಶಿವ ಆಯೋಗದ ವರದಿ ಜಾರಿ ಕುರಿತು ಮಾದಿಗ ಸಂಘಟನೆ ಡಾ.ಬಾಬು ಜಗಜೀವನರಾಮ್ ವಿಚಾರ ವೇದಿಕೆ ಅಧ್ಯಕ್ಷ ಸಿ.ತಿಮ್ಮಯ್ಯ ನೇತೃತ್ವದಲ್ಲಿ ಶನಿವಾರ ಸಭೆ ಆಯೋಜಿಸಲಾಗಿತ್ತು.

ಸಿ.ತಿಮ್ಮಯ್ಯ ಮಾತನಾಡಿ, ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳಲ್ಲಿ ಸುಮಾರು 101 ಉಪ ಜಾತಿಗಳಿದ್ದು, ಈ ಜಾತಿಗಳಿಗೆ ಡಾ.ಆರ್.ಅಂಬೇಡ್ಕರ್ ಸಂವಿಧಾನದಡಿ ಮೀಸಲಾತಿಯನ್ನು ನೀಡಿದೆ. 101 ಜಾತಿಗಳ ಪೈಕಿ ಅತ್ಯಂತ ಹಿಂದುಳಿದ ಜಾತಿ ಮಾದಿಗ ಜಾತಿ. ನಮ್ಮ ಜಾತಿಯ ಜನಸಂಖ್ಯೆಗೆ ತಕ್ಕಂತೆ ಒಳಮೀಸಲಾತಿಯನ್ನು ಜಾರಿಗೆ ತರುವಂತೆ ಸುಮಾರು 35 ವರ್ಷಗಳಿಂದ ರಾಜ್ಯಾದ್ಯಂತ ಆಡಳಿತ ನಡೆಸಿದ ಸರ್ಕಾರಗಳನ್ನು ಒತ್ತಾಯಿಸಿದ್ದೆವು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಸಚಿವರಾಗಿದ್ದ ಮಾಧುಸ್ವಾಮಿ ಸಮಿತಿ ನೇತೃತ್ವದಲ್ಲಿ ರಾಜ್ಯದಲ್ಲಿ ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳಿಸಿತ್ತು. ಇದರ ವರದಿ ಉಲ್ಲೇಖಿಸಿ ನಮ್ಮ ಸಮಾಜದ ವಕೀಲರು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಗಳಿಗೆ ಒಳಮೀಸಲಾತಿ ಆಯಾಯ ರಾಜ್ಯ ಸರ್ಕಾರಗಳು ಜಾರಿಗೆ ತರಬೇಕೆಂದು ಆದೇಶಿಸಿತ್ತು. ಆದರೆ ನಮ್ಮ ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿ ಮಾಡಲು ವಿಳಂಬ ಮಾಡುತ್ತಾ, ನ್ಯಾ.ನಾಗಮೋಹನದಾಸ್ ನೇತೃತ್ವದಲ್ಲಿ ಜನಗಣತಿ ಮರುಆರಂಭಿಸಿದೆ. ಗಣತಿಗೆ ಜೂನ್ ತಿಂಗಳ ಗಡುವು ನೀಡಿದ್ದು, ಇದುವರೆಗೂ ಇದು ಪೂರ್ಣಗೊಂಡಿಲ್ಲ. ಜತೆಗೆ ಒಳ ಮೀಸಲಾತಿ ಜಾರಿ ಯಾಗುವವರೆಗೂ ಬಡ್ತಿ ನೇಮಕಾತಿ ಮಾಡುವುದಿಲ್ಲ ಎಂದು ಹೇಳಿದೆ. ಆದರೆ ಸರ್ಕಾರ ಒಳಗೊಳಗೆ ಬಡ್ತಿ ಪ್ರಕ್ರಿಯೆ ನಡೆಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದ ಈ ನಡೆ ಖಂಡಿಸಿ ಹಾಗೂ ಸದಾಶಿವ ಆಯೋಗ ವರದಿ ಜಾರಿ ಮಾಡುವಂತೆ ಒತ್ತಾಯಿಸಿ ಸರ್ಕಾರದ ವಿರುದ್ಧ ಜೂ.9ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಆಯೋಜಿಸಿರುವ ಹೋರಾಟಕ್ಕೆ ಕೋಟೆ ಮತ್ತು ಸರಗೂರು ತಾಲೂಕಿನ ಮಾದಿಗ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.

ಡಾ.ಬಾಬು ಜಗಜೀವನರಾಮ್ ವಿಚಾರ ವೇದಿಕೆ ಅಧ್ಯಕ್ಷ ಸಿ.ತಿಮ್ಮಯ್ಯ, ಎಡತೊರೆ ಸುಭಾಷ್, ಸೋಮು ಪಟೇಲ್, ಎಡತೊರೆ ಮಹೇಶ್, ಮುಳ್ಳೂರು ಸಿದ್ದಪ್ಪ, ಮಾತಂಗ ಜನಜಾಗೃತಿ ವೇದಿಕೆ ಅಧ್ಯಕ್ಷ ಬೂದನೂರು ರವೀಶ್, ಮೊಳೆಯೂರು ನಾಗರಾಜ್, ಕೆ.ಟಿ.ಹರೀಶ್, ಶಿವರಾಜಯ್ಯ, ಶಿವಾಜಿ, ದಿನೇಶ್ , ತಿಮ್ಮರಾಜು ಇತರರಿದ್ದರು.