ವಿಜಯವಾಣಿ ಸುದ್ದಿಜಾಲ ಧಾರವಾಡ
ಪರಿಷ್ಕೃತ ವೇತನ ಜಾರಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಅಧೀನ ಮಹಾವಿದ್ಯಾಲಯಗಳ ಸಹಾಯಕ/ಅತಿಥಿ ಉಪನ್ಯಾಸಕರ ಸಂಘದ ವತಿಯಿಂದ ಕವಿವಿ ಆಡಳಿತ ಕಚೇರಿ ಎದುರು ಪ್ರತಿಭಟನೆ ಆರಂಭಿಸಲಾಗಿದೆ.
ಕಲ್ಯಾಣನಗರದ ಉದ್ಯಾನದಿಂದ ಕವಿವಿ ಆಡಳಿತ ಭವನ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಬಳಿಕ ಆಡಳಿತ ಕಚೇರಿ ಎದುರು ಧರಣಿ ಆರಂಭಿಸಿದ್ದು, ಕವಿವಿ ಆಡಳಿತ ಮಂಡಳಿ ನಿರ್ಲಕ್ಷ್ಯ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ವಿಶ್ವ ವಿದ್ಯಾಲಯದ ಆಡಳಿತ ಮಂಡಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಅನಿವಾರ್ಯವಾಗಿ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಸಪ್ಟೆಂಬರ್ನಲ್ಲಿ ಏರ್ಪಡಿಸಿದ್ದ ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ ಕೈಗೊಂಡ ವೇತನ ಜಾರಿ ನಿರ್ಣಯಕ್ಕೆ ಕವಿವಿ ಅಕಾರಿಗಳು ಮೀನಮೇಷ ಮಾಡುತ್ತಿದ್ದಾರೆ. ಇದರಿಂದ 500ಕ್ಕೂ ಹೆಚ್ಚು ತಾತ್ಕಾಲಿಕ ಉಪನ್ಯಾಸಕರಿಗೆ ಅನ್ಯಾಯ ಆಗುತ್ತಿದೆ. ಹೀಗಾಗಿ ಕೂಡಲೇ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.
ವೇತನ ಪರಿಷ್ಕರಣೆ ಬಗ್ಗೆ ಅಧಿಕೃತ ಭರವಸೆ ಸಿಗುವವರೆಗೂ ಧರಣಿ ನಡೆಯಲಿದೆ ಎಂದು ಎಚ್ಚರಿಸಿದರು. ಸಂಘದ ಅಧ್ಯಕ್ಷ ಡಾ. ಶರಣು ಮುಷ್ಠಿಗೇರಿ, ಉಪಾಧ್ಯಕ್ಷ ಡಾ.ಮಲ್ಲಿಕಾರ್ಜುನ ಬ್ಯಾಲ್ಯಾಳ, ಡಾ.ವಿಶ್ವನಾಥ ಚಿಂತಾಮಣಿ, ಡಾ.ಮಂಜುನಾಥ ಅಡಿಗಲ್, ಡಾ. ಮಹಾದೇವ ಆರೇರ್, ಡಾ.ರಂಗಪ್ಪ ಎಂ. ಎಸ್, ಅತಿಥಿ ಉಪನ್ಯಾಸಕರು, ಇತರರು ಇದ್ದರು.