ಹೊನ್ನಾವರ: ಅರಣ್ಯವಾಸಿಗಳ ಸಮಸ್ಯೆಗಳ ಪರಿಹಾರಕ್ಕೆ ರಾಷ್ಟ್ರೀಯ ಹೊಸ ಅರಣ್ಯ ನೀತಿ ಜಾರಿಗೆ ತರಬೇಕು ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಆಗ್ರಹಿಸಿದರು.
ಪ್ರಭಾತನಗರದ ಶ್ರೀ ಮೂಡಗಣಪತಿದ ದೇವಸ್ಥಾನದ ಸಭಾಂಗಣದಲ್ಲಿ ರಾಜ್ಯ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಅರಣ್ಯವಾಸಿಗಳಿಗಾಗಿ ಶನಿವಾರ ಆಯೋಜಿಸಿದ್ದ ಕಾನೂನು ಜಾಗೃತಿ ಜಾಥಾ ಉದ್ಘಾಟಿಸಿ ಅವರು ಮಾತನಾಡಿದರು.
ಅರಣ್ಯವಾಸಿಗಳಿಗೆ ಮೂಲಸೌಕರ್ಯಗಳಾದ ಮನೆ ನಂಬರ್, ನೀರು, ರಸ್ತೆ ನೀಡುತ್ತದೆ. ಅದೇ ರೀತಿ ಸರ್ಕಾರ ಸವೋಚ್ಛ ನ್ಯಾಯಾಲಯದಲ್ಲಿ ಅನಧಿಕೃತ ಒತ್ತುವರಿದಾರರನ್ನು ಒಕ್ಕಲೇಬ್ಬಿಸುವ ಬಗ್ಗೆ ಪ್ರಮಾಣ ಪತ್ರ ಸಲ್ಲಿಸುತ್ತಿರುವುದು ಸರ್ಕಾರದ ಧ್ವಂದ ನೀತಿಯನ್ನು ಪ್ರದರ್ಶಿಸುತ್ತದೆ. ಇಂದು ಅರಣ್ಯವಾಸಿಗಳು ಸರ್ಕಾರದ ನೀತಿಯಿಂದ ನಿರಾಶ್ರಿತರಾಗುವ ಭೀತಿ ಎದುರಿಸುತ್ತಿದ್ದಾರೆ. ಈಗಾಗಲೆ ಕಳೆದ 2 ದಶಕದಲ್ಲಿ ರಾಷ್ಟ್ರೀಯ ಹುಲಿ ಯೋಜನೆ ಅಡಿಯಲ್ಲಿ 1 ಲಕ್ಷ ಕುಟುಂಬ ಸ್ಥಳಾಂತರಿಸಿದರೆ, 64 ಸಾವಿರ ಕುಟುಂಬಗಳಿಗೆ ಸ್ಥಳಾಂತರಕ್ಕೆ ನಿರ್ದೇಶನ ನೀಡಿರುವುದು ಆತಂಕಕಾರಿ ಸಂಗತಿ ಎಂದರು.
ಶಾಂತಿ ಗೌಡ ಕಡ್ನೀರು, ವಿನೋದ ನಾಯ್ಕ, ದಾವುದ್ ಸಾಬ, ಸುರೇಶ ತಂಬೋಳ್ಳಿ, ಗಿರೀಶ ಚಿತ್ತಾರ, ಜಾನ್ ಒಡ್ತಾ, ರಫೀಕ್, ಧರ್ಮ ನಾಯ್ಕ, ಸುರೇಶ ನಗರಬಸ್ತಿಕೇರಿ, ರೈತರು, ಕಾರ್ವಿುಕರು ಪಾಲ್ಗೊಂಡಿದ್ದರು.ವೇದಿಕೆಯ ನಗರ ಅಧ್ಯಕ್ಷ ಸುರೇಶ ಮೇಸ್ತ ಸ್ವಾಗತಿಸಿದರು. ರಾಘವೇಂದ್ರ ಕವಂಚೂರು ಪ್ರಾಸ್ತಾವಿಕ ಮಾತನಾಡಿದರು. ರಾಮ ಮರಾಠಿ ವಂದಿಸಿದರು.