ಜಿಲ್ಲೆ

ಮಾಧವ ಗಾಡ್ಗೀಳ್​ ವರದಿ ಜಾರಿಗೆ ಆಗ್ರಹ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಉತ್ತರ ಕನ್ನಡದ ಶಿರೂರು ಗುಡ್ಡ ಕುಸಿತ ಮತ್ತು ವಯನಾಡ್​ ಭೂ ಕುಸಿತಗಳು ಪಶ್ಚಿಮ ಘಟ್ಟಗಳ ರಕ್ಷಣೆಯ ಮಹತ್ವ ಸಾರುತ್ತಿವೆ. ಹೀಗಾಗಿ ಪಶ್ಚಿಮ ಘಟ್ಟಗಳ ಪರಿಸರ ಪರಿಣತರ ವರದಿ (ಮಾಧವ ಗಾಡ್ಗೀಳ್​ ವರದಿ) ಜಾರಿಗೊಳಿಸುವಂತೆ ಆಗ್ರಹಿಸಿ ಪರಿಸರವಾದಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಗರದ ಜುಬಿಲಿ ವೃತ್ತದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು, ಪರಿಸರ ಉಳಿಸುವ ನಿಟ್ಟಿನಲ್ಲಿ ವರದಿಯನ್ನು ಕೂಡಲೇ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
2011ರಲ್ಲಿ ಪಶ್ಚಿಮ ಘಟ್ಟ ಪರಿಸರ ಪರಿಣತರ ಸಮಿತಿ ಪಶ್ಚಿಮ ಘಟ್ಟಗಳ ರಕ್ಷಣೆಗೆ ವರದಿ ಕೊಟ್ಟಿತ್ತು. ಈಗ ಅದು ವ್ಯಾಪಕವಾಗಿ ಚರ್ಚೆಗೆ ಬರುತ್ತಿದೆ. ಅಂದೇ ಈ ವರದಿಯನ್ನು ಒಪ್ಪಿ ಜಾರಿಗೆ ತಂದಿದ್ದರೆ 2018, 2019ರಲ್ಲಿ ಕೊಡಗು, ಕೇರಳಗಳಲ್ಲಿ ಈಗ 2024ರಲ್ಲಿ ಉತ್ತರ ಕನ್ನಡ ಮತ್ತು ವಯನಾಡಿನಲ್ಲಿ ಆದ ಭೀಕರ ಗುಡ್ಡ ಕುಸಿತ, ಸಾವು ನೋವು ತಡೆಗಟ್ಟಬಹುದಿತ್ತು ಎಂದು ದೂರಿದರು.
ಪಶ್ಚಿಮ ಘಟ್ಟಗಳ ಹಲವು ಜೀವ ನದಿಗಳ ಉಗಮ ಸ್ಥಾನ. ವಿಶ್ವದ ಅಪರೂಪದ ಜೀವವೈವಿಧ್ಯದ ನೆಲೆಯಾಗಿದೆ. ಪಶ್ಚಿಮ ಘಟ್ಟಗಳ ಅಳಿವು ಕೋಟ್ಯಂತರ ಜೀವ ಸಂಕುಲದ ಅಸ್ತಿತ್ವಕ್ಕೆ ಧಕ್ಕೆ ತರುತ್ತದೆ ಎಂದು ತಜ್ಞರು, ಪರಿಸರ ವಿಜ್ಞಾನಿಗಳು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟಗಳ ಪರಿಸರ ಪರಿಣತರ ವರದಿ ಜಾರಿಗೆ ಸರ್ಕಾರ ತ್ವರಿತವಾಗಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿಪತ್ರ ರವಾನಿಸಿದರು.
ಡಾ.ಸಂಜೀವ ಕುಲಕರ್ಣಿ, ಶಂಕರ ಕುಂಬಿ, ಬಸವಪ್ರಭು ಹೊಸಕೇರಿ, ಡಾ.ಗೋಪಾಲ ದಾಬಡೆ, ಶಾರದಾ ಗೋಪಾಲ, ಅಶೋಕ ಹಡಪದ, ಸರಸ್ವತಿ ಪೂಜಾರ, ಸುಭದ್ರಾ ಕುಲಕರ್ಣಿ, ಶ್ರೀನಿವಾಸ ಕುಲಕರ್ಣಿ, ಎಸ್​.ಬಿ.ಪತ್ತಾರ, ಆರ್​.ಜೆ.ತಿಮ್ಮಾಪುರ, ಶಿವಾನಂದ ಶೆಟ್ಟರ್​, ಇತರರು ಇದ್ದರು.