ಶಿವಮೊಗ್ಗ: ರಾಜ್ಯ ಸರ್ಕಾರ ಕೂಡಲೇ ಒಳ ಮೀಸಲಾತಿ ಹಾಗೂ ಜಾತಿಗಣತಿ ವರದಿ ಜಾರಿಗೊಳಿಸಬೇಕೆಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಡಿ.ಶಿವಪ್ಪ ಒತ್ತಾಯಿಸಿದ್ದಾರೆ.
ಸುಪ್ರೀಂಕೋರ್ಟ್ ಆದೇಶದಂತೆ ಒಳ ಮೀಸಲಾತಿ ಮತ್ತು ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಅಧ್ಯಯನ ಮಾಡಿರುವ ಕಾಂತರಾಜ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಕೂಡಲೇ ಜಾರಿ ಮಾಡಬೇಕೆಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಒಳ ಮೀಸಲಾತಿ ಜಾರಿಗೆ ತರಲು ಕರ್ನಾಟಕದಲ್ಲಿ ಸೂಕ್ತವಾದ ವಾತವರಣವಿದೆ. ಒಳ ಮೀಸಲಾತಿ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಎಸ್ಸಿ ಪಟ್ಟಿಯೊಳಗಿರುವ ಬಹುತೇಕ ಉಪಜಾತಿಗಳು ಸ್ವಾಗತಿಸಿವೆ. ಒಂದೆರಡು ಉಪಜಾತಿಗಳು ಕ್ಷೀಣವಾಗಿ ವಿರೋಧ ವ್ಯಕ್ತಪಡಿಸಿವೆ. ಆದರೆ ಸದಾಶಿವ ಆಯೋಗ ನಡೆಸಿದ ಅಧ್ಯಯನದ ಮಾದರಿ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಕಾಂತರಾಜ ನೇತೃತ್ವದ ಆಯೋಗವು ವೈಜ್ಞಾನಿಕವಾಗಿ ಎಲ್ಲ ಜಾತಿಗಳ ದತ್ತಾಂಶವನ್ನು ಸಂಗ್ರಹಿಸಿ ವರದಿ ನೀಡಿದೆ. ಇದರಲ್ಲಿ ಪ್ರತಿ ಜಾತಿ ಹಾಗೂ ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ವಿವರಗಳನ್ನು ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ಒತ್ತಡಕ್ಕೆ ಮಣಿಯದೆ ಕಾಂತರಾಜ ಆಯೋಗದ ವರದಿಯನ್ನು ಅಂಗೀಕರಿಸಬೇಕೆಂದು ಆಗ್ರಹಿಸಿದರು.
ಅಂಬೇಡ್ಕರ್ ಅವರ 69ನೇ ಪರಿನಿರ್ವಾಣ ದಿನವಾದ ಡಿ.6ರೊಳಗೆ ಸಿದ್ದರಾಮಯ್ಯ ಕಾಂತರಾಜ ಆಯೋಗ ವರದಿ ಜಾರಿ ಮಾಡದೇ ಇದ್ದರೆ ನಮ್ಮ ಪಕ್ಷದಿಂದ ಬೃಹತ್ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರಮುಖರಾದ ಎಚ್.ಎನ್.ಶ್ರೀನಿವಾಸ್, ಲೋಕೇಶ್ ತಮ್ಮಡಿಹಳ್ಳಿ, ಎ.ಡಿ.ಲಕ್ಷ್ಮೀಪತಿ, ಪ್ರಜ್ವಲ್, ಮನು ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.