ಜಿಲ್ಲೆ

ಒಳಮೀಸಲಾತಿ ಜಾರಿಗೆ ಆಗ್ರಹ

ಮಾದೇಶ್ ತಿ.ನರಸೀಪುರ

ಹುಣಸೂರು: ರಾಜ್ಯ ಸರ್ಕಾರ ಶೀಘ್ರ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಒಳಮೀಸಲಾತಿ ಹೋರಾಟ ಸಮಿತಿ ಶುಕ್ರವಾರ ತಾಲೂಕು ಘಟಕ ತಹಸೀಲ್ದಾರ್ ಜೆ.ಮಂಜುನಾಥ್‌ಗೆ ಮನವಿ ಸಲ್ಲಿಸಿತು.

ಈ ವೇಳೆ ಮಾತನಾಡಿದ ಒಳಮೀಸಲಾತಿ ಹೋರಾಟ ಸಮಿತಿ ಗೌರವಾಧ್ಯಕ್ಷ ಹರೀಶ್ ಆಂಜನೇಯ, 2024ರ ಆ.1ರಂದು ಸುಪ್ರೀಂ ಕೋರ್ಟ್ ಒಳಮೀಸಲಾತಿಯನ್ನು ಅಯಾ ರಾಜ್ಯ ಸರ್ಕಾರಗಳಿಗೆ ನಿಯಾಮನುಸಾರ ಜಾರಿ ಮಾಡಲು ಆದೇಶಿಸಿದೆ. 2023ರ ಸಾರ್ವತ್ರಿಕ ಚುನಾವಣೆ ವೇಳೆ ರಾಜ್ಯ ಕಾಂಗ್ರೆಸ್ ಒಳಮೀಸಲಾತಿಯನ್ನು ಜಾರಿಗೊಳಿಸುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿದೆ. ಹೀಗಿದ್ದೂ ಅಧಿಕಾರಕ್ಕೆ ಬಂದು 30 ತಿಂಗಳುಗಳೇ ಸಂದರೂ ಇಂದಿಗೂ ಒಳಮೀಸಲಾತಿ ಜಾರಿಗೊಳಿಸುತ್ತಿಲ್ಲ. ಬದಲಾಗಿ ಬಡ್ತಿಯಲ್ಲಿ ನೇಮಕಾತಿ, ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಡುವ ಕಾರ್ಯಕ್ಕೆ ಮುಂದಾಗಿರುವುದು ಖಂಡನೀಯ ಎಂದರು.

ಸಮಿತಿ ಕಾರ್ದರ್ಶಿ ವೆಂಕಟೇಶ್ ಬೆಳ್ತೂರು ಮಾತನಾಡಿ, ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ 3 ತಿಂಗಳಿಂದ ಪಾದಯಾತ್ರೆ ನಡೆಸಿ ಸಮುದಾಯವನ್ನು ಜಾಗೃತಿ ಮೂಡಿಸುತ್ತಿದೆ. ಆದರೆ ಆರ್.ಭಾಸ್ಕರ್ ಪ್ರಸಾದ್ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಯನ್ನು ಹತ್ತಿಕ್ಕುವ ಸಲುವಾಗಿ ಪ್ರಯತ್ನಗಳು ನಡೆದಿರುವುದು ಖಂಡನೀಯ. ಜೂ.9ರಂದು ಬೆಂಗಳೂರಿನಲ್ಲಿ ಆಯೋಜಿಸಿರು ಮಾದಿಗರ ಕ್ರಾಂತಿಕಾರಿ ಸಮಾವೇಶಕ್ಕೆ ತಾಲೂಕಿನಿಂದ 500ಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಮನವಿ ಸಲ್ಲಿಕೆ ವೇಳೆ ಸಮಿತಿ ಸಹಕಾರ್ಯದರ್ಶಿ ಶಿವರಾಮು, ಮುಖಂಡ ಎಚ್.ಎಸ್.ವೆಂಕಟರಾಮು, ಕಿಟ್ಟು, ಬಸವರಾಜು ಇತರರು ಇದ್ದರು.