ಜಿಲ್ಲೆ

ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಜಾರಿಗೆ ಆಗ್ರಹ

ಹುಬ್ಬಳ್ಳಿ : ಮಹತ್ವಾಕಾಂಕ್ಷೆಯ ಹುಬ್ಬಳ್ಳಿ -ಅಂಕೋಲಾ ರೈಲು ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸುವ ಉದ್ದೇಶದಿಂದ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ನೇತೃತ್ವದಲ್ಲಿ ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರ ಸಭೆ ನಡೆಸಲು ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಮಂಗಳವಾರ ಕರೆದ ಸಭೆಯಲ್ಲಿ ನಿರ್ಧರಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಸಿದ್ರಾಮಯ್ಯ ಸಂಶಿಮಠ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಉತ್ತರ ಕನ್ನಡ ಮತ್ತು ಹುಬ್ಬಳ್ಳಿ ಭಾಗದ ವಿವಿಧ ಸಂಘ -ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು. ಹುಬ್ಬಳ್ಳಿಅಂಕೋಲಾ ರೈಲ್ವೆ ಯೋಜನೆಯ ಜಾರಿಗೆ ಇರುವ ತೊಡಕುಗಳು ಮತ್ತು ಸಾಧ್ಯತೆಗಳ ಕುರಿತು ರ್ಚಚಿಸಲಾಯಿತು.

ಸಂಸ್ಥೆಯ ಮಾಜಿ ಅಧ್ಯಕ್ಷ ವಸಂತ ಲದವಾ ಮಾತನಾಡಿ, ಸರ್ಕಾರದ ಮೇಲೆ ಪಕ್ಷಾತೀತವಾಗಿ ಒತ್ತಡ ಹೇರಿದರೆ ಯೋಜನೆ ಜಾರಿ ಮಾಡಬಹುದು ಎಂದರು.

ನೈಋತ್ಯ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಮಹೇಂದ್ರ ಸಿಂಘಿ ಮಾತನಾಡಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರೊಂದಿಗೆ ರ್ಚಚಿಸಿ, ಮುಂದಿನ ಕಾರ್ಯಸೂಚಿ ರೂಪಿಸೋಣ ಎಂದರು.

ಪತ್ರಕರ್ತ ಗಂಗಾಧರ ಹಿರೇಗುತ್ತಿ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಅಭಿವೃದ್ಧಿಗೆ ಈ ಯೋಜನೆ ಅಗತ್ಯವಿದೆ. ಆದರೆ, ಅನಗತ್ಯವಾಗಿ ಅಡ್ಡಿಪಡಿಸುವ ಯತ್ನ ನಡೆದಿದೆ ಎಂದರು.

ಹುಬ್ಬಳ್ಳಿ ಅಂಕೋಲಾ ರೈಲ್ವೆ ಯೋಜನೆಗೆ ಇರುವ ಕಾನೂನು ತೊಡಕು ಬಹುತೇಕ ಮುಗಿದಿದೆ ಎಂದು ಯೋಜನೆಯ ಪರ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದ ವಕೀಲ ಅಕ್ಷಯ ಕೊಲ್ಲೆ ಮಾಹಿತಿ ನೀಡಿದರು.

ನ್ಯಾಯಾಲಯ ಈಗಾಗಲೇ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಉದ್ದಕ್ಕೂ ಪರಿಸರಕ್ಕೆ ಕಡಿಮೆ ಹಾನಿಯಾಗುವಂತೆ ಸರ್ವೆ ನಡೆಸುವಂತೆ ಸೂಚಿಸಿದೆ. ಈ ವರದಿಗೆ ರಾಜ್ಯ ವನ್ಯಜೀವಿ ಸಂರಕ್ಷಣಾ ಮಂಡಳಿ ಮತ್ತು ಕೇಂದ್ರ ವನ್ಯಜೀವಿ ಸಂರಕ್ಷಣೆ ಮಂಡಳಿಯಿಂದ ಒಪ್ಪಿಗೆ ಸಿಕ್ಕಲ್ಲಿ ಯೋಜನೆ ಜಾರಿಯಾಗಲು ಅಡ್ಡಿ ಇಲ್ಲ ಎಂದು ತಿಳಿಸಿದರು.

ಉತ್ತರ ಕನ್ನಡ ಜಿಲ್ಲಾ ನಾಗರಿಕ ಸಂಘ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಮಾಧವ ನಾಯಕ, ವಾಣಿಜ್ಯೋದ್ಯಮ ಸಂಸ್ಥೆಯ ಕಾರ್ಯದರ್ಶಿ ರವೀಂದ್ರ ಬಳಿಗಾರ, ಇತರರು ಮಾತನಾಡಿದರು.

ಉತ್ತರ ಕನ್ನಡ ರೈಲ್ವೆ ಬಳಕೆದಾರರ ಸಮಿತಿ ಅಧ್ಯಕ್ಷ ಜಾರ್ಜ್ ಫರ್ನಾಂಡೀಸ್, ಉಪಾಧ್ಯಕ್ಷ ವೆಂಟು ಮಾಸ್ತರ ಶೀಳ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ್, ಪ್ರಮುಖರಾದ ಡಾ. ಮಹೇಶ ಗೋಳಿಕಟ್ಟೆ, ಪ್ರೀತಂ ಮಾಸೂರಕರ್, ರವಿ ನಾಯ್ಕ, ರಾಜಗೋಪಾಲ ಅಡಿ, ಹುಬ್ಬಳ್ಳಿಅಂಕೋಲಾ ರೈಲ್ವೆ ಹೋರಾಟ ಕ್ರಿಯಾ ಸಮಿತಿ ಕಾರ್ಯದರ್ಶಿ ವಿಠ್ಠಲದಾಸ ಕಾಮತ್ ಮತ್ತಿತರರು ಅಭಿಪ್ರಾಯ ವ್ಯಕ್ತಪಡಿಸಿದರು.