ಮೈಸೂರು: ರಾಜ್ಯ ಸರ್ಕಾರ ಕಾಂತರಾಜ ಆಯೋಗದ ಜಾತಿ ಗಣತಿ ವರದಿ ಅಂಗೀಕರಿಸಿ ಜಾರಿಗೆ ತರಬೇಕು. ಮುಸ್ಲಿಮರ ಮೀಸಲಾತಿ ಪ್ರಮಾಣವನ್ನು ಶೇ.8ಕ್ಕೆ ಏರಿಕೆ ಮಾಡಬೇಕೆಂದು ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಗುರುವಾರ ಪುರಭವನ ಮುಂಭಾಗದ ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಯಿತು.
2018ರಲ್ಲಿ ಸಿದ್ದರಾಮಯ್ಯ ಮೊದಲ ಬಾರಿ ಮುಖ್ಯಮಂತ್ರಿಯಾದಾಗಲೇ 160 ಕೋಟಿ ರೂ. ವ್ಯಯಿಸಿ ಜಾತಿ ಜನಗಣತಿ ವರದಿ ಸಿದ್ಧಪಡಿಸಲಾಗಿತ್ತು. ಆದರೆ, ಕಾರಣಾಂತರಗಳಿಂದ ಬಿಡುಗಡೆಯಾಗಲಿಲ್ಲ. ಈಗ ಮತ್ತೊಮೆ ವರದಿ ಬಿಡುಗಡೆಗೆ ಅವಕಾಶ ಬಂದಿದೆ. ಜಾತಿ ಜನಗಣತಿ ವರದಿ ಬಿಡುಗಡೆಯಿಂದ ಸಾಮಾಜಿಕ ನ್ಯಾಯ ಸಿಗಲಿದೆ. ಹೀಗಾಗಿ ವರದಿಯನ್ನು ಕೂಡಲೇ ಬಿಡುಗಡೆ ಮಾಡಬೇಕು. ಮುಸ್ಲಿಮರ ಮೀಸಲಾತಿ ಪ್ರಮಾಣವನ್ನು ಶೇ.8ಕ್ಕೆ ಏರಿಕೆ ಮಾಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ, ಜಿಲ್ಲಾಧ್ಯಕ್ಷ ರಫತ್‌ಖಾನ್, ರಾಜ್ಯ ಸಮಿತಿ ಸದಸ್ಯ ಅಮ್ಜದ್ ಖಾನ್, ಮೌಲಾನ ನೂರುದ್ದೀನ್, ಜಿಲ್ಲಾ ಉಪಾಧ್ಯಕ್ಷ ಎಸ್.ಸ್ವಾಮಿ, ಮೊಹಮ್ಮದ್ ಸಫಿವುಲ್ಲಾ, ಮನ್ಸೂರ್ ಅಹಮದ್ ಸೇರಿದಂತೆ ಹಲವರು ಭಾಗವಹಿಸಿದ್ದರು.