ಬ್ಯಾಡಗಿ: ತಾಲೂಕಿನ ಶಿಡೇನೂರ ಹಾಗೂ ಬಿದರಕಟ್ಟಿ ಸುತ್ತಮುತ್ತಲಿನ ಭಾಗದಲ್ಲಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿರುವ ಪುರಾತನ ಹಾಗೂ ಐತಿಹಾಸಿಕ ಹಿನ್ನೆಲೆಯಿರುವ ಶ್ರೀ ಗವಿಸಿದ್ಧೇಶ್ವರ ದೇವಸ್ಥಾನದ ಜೀಣೋದ್ಧಾರಕ್ಕೆ ಅನುದಾನ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಶನಿವಾರ ಸ್ಥಳೀಯ ಗ್ರಾಮಸ್ಥರು ಶಾಸಕ ಬಸವರಾಜ ಶಿವಣ್ಣನವರಗೆ ಮನವಿ ಸಲ್ಲಿಸಿದರು.
ಶಿಡೇನೂರು ಗ್ರಾಮದ ಮನೆ ಬಿದ್ದ ಫಲಾನುಭವಿಗಳ ಭೇಟಿ ಹಾಗೂ ಮನೆಗಳ ವೀಕ್ಷಣೆಗೆ ತೆರಳಿದ ವೇಳೆ ಸ್ಥಳೀಯ ಗ್ರಾಮದ ಮುಖಂಡರು ಮನವಿ ಸಲ್ಲಿಸಿದರು. ಗ್ರಾಮಸ್ಥ ಕಿರಣಕುಮಾರ ಗಡಿಗೋಳ ಮಾತನಾಡಿ, ಗ್ರಾಮದ ಸುತ್ತಮುತ್ತ ಕಾಯ್ದಿಟ್ಟ ಮೀಸಲು ಅರಣ್ಯ ಪ್ರದೇಶದಲ್ಲಿ ಶತಮಾನ ಕಂಡ ದೇವಾಲಯವಿದೆ. ಅದು ಶಿಥಿಲಾವಸ್ಥೆ ತಲುಪಿದ್ದು, ಹಳೆಯ ವಿನ್ಯಾಸದಲ್ಲಿ ಮರುನಿರ್ವಣ ಮಾಡಲು ಶಾಸಕರು ದೈವಿವನ ಯೋಜನೆಯಲ್ಲಿ ಅನುದಾನ ಒದಗಿಸಬೇಕು ಎಂದು ಮನವಿ ಮಾಡಿದರು.
ನಾಗಪ್ಪ ಕರ್ಜಗಿ ಮಾತನಾಡಿ, ಪುರಾತನ ದೇವಸ್ಥಾನಕ್ಕೆ ಹೋಗಿಬರಲು ಮೂಲಸೌಲಭ್ಯವಿಲ್ಲ, ಈ ಕುರಿತು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಶ್ರೀ ಗವಿಸಿದ್ಧೇಶ್ವರ ದೇವಸ್ಥಾನಕ್ಕೆ ತೆರಳಲು ರಸ್ತೆ ನಿರ್ವಣ, ಬೆಳಕು, ನೀರಿನ ವ್ಯವಸ್ಥೆ ಸೇರಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು. ಪ್ರತಿವರ್ಷ ದೊಡ್ಡ ಪ್ರಮಾಣದಲ್ಲಿ ಉತ್ಸವ ನಡೆಯಲಿದ್ದು, ರಸ್ತೆ ಸಮಸ್ಯೆಯಿಂದ ಭಕ್ತರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ ಎಂದರು.
ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಗ್ರಾಮಕ್ಕೆ ಮೊದಲ ಬಾರಿಗೆ ಆಗಮಿಸಿದ ಶಾಸಕ ಬಸವರಾಜ ಶಿವಣ್ಣನವರ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ಕೆಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜ ಹುಲ್ಲತ್ತಿ, ಪರಮೇಶಪ್ಪ ತೆವರಿ, ದಾನಪ್ಪ ಚೂರಿ, ಬಸವರಾಜ ಕಡ್ಡೆರ, ಮಲ್ಲಿಕಾರ್ಜುನ ದುರ್ಗದ, ನಾಗಪ್ಪ ಬಾವಿಕಟ್ಟಿ, ರಮೇಶ ಸುತ್ತಕೋಟಿ, ಶಂಭನಗೌಡ ಪಾಟೀಲ, ಚೆನ್ನಬಸಪ್ಪ ಹುಲ್ಲತ್ತಿ, ಇತರರಿದ್ದರು.