ಬೆಂಗಳೂರು: ಹಾಲು ಉತ್ಪಾದಕರು ಭಾರಿ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಹಾಲು ಉತ್ಪಾದಕರ ನೆರವಿಗೆ ಧಾವಿಸಬೇಕೆಂದು ಬಿಜೆಪಿ ಹಾಲು ಉತ್ಪಾದಕರ ಪ್ರಕೋಷ್ಠ ರಾಜ್ಯ ಸಂಚಾಲಕ ಡಾ.ಎಂ.ಆರ್.ವೆಂಕಟೇಶ್ ಒತ್ತಾಯಿಸಿದ್ದಾರೆ.
ಈ ಬಾರಿ ರಾಜ್ಯದಲ್ಲಿ ವಾಡಿಕೆಯ ಸರಾಸರಿ ಮಳೆಯಾಗದೇ ಬರದ ಪರಿಸ್ಥಿತಿ ಎದುರಾಗಿದ್ದು ಹಾಲು ಉತ್ಪಾದಕರು ಹೈನುಗಾರಿಕೆಯನ್ನು ನಡೆಸುವುದೇ ರೈತರಿಗೆ ಬಹು ದೊಡ್ಡ ಸವಾಲಾಗಿದೆ. ಒಂದೆಡೆ ಹಸಿ ಹುಲ್ಲಿನ ಸಮಸ್ಯೆಯಾಗಿದ್ದು, ರಾಜ್ಯಾದ್ಯಂತ ಒಣಹುಲ್ಲಿನ ದರಗಳಲ್ಲಿ ಭಾರಿ ಏರಿಕೆ ಕಂಡು ಬಂದಿದೆ. ಹಾಲು ಉತ್ಪಾದಕರು ಭಾರಿ ಸಂಕಷ್ಟಕ್ಕೆ ಸಿಲುಕಿದ್ದು, ಹೈನುಗಾರಿಕೆಯನ್ನು ನಡೆಸುವುದೇ ದುಸ್ತರವಾಗಿದೆ. ಮತ್ತೊಂದೆಡೆ ರಾಸುಗಳಿಗೆ ಚರ್ಮರೋಗ, ಗಂಟುರೋಗ ಉಲ್ಬಣಗೊಂಡಿದ್ದು ಹಾಲಿನ ಉತ್ಪಾದನೆ ಕುಂಠಿತಗೊಂಡಿದೆ. ಈ ಮಧ್ಯ ಹಾಲು ಒಕ್ಕೂಟಗಳು ಹಾಲು ಉತ್ಪಾದಕರಿಗೆ ನೀಡುವ ಹಾಲಿನ ದರದಲ್ಲಿ ಲೀಟರ್‌ಗೆ ಸರಾಸರಿ ೨೧ ರೂ. ಕಡಿತ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ರಾಜ್ಯದ ಎಲ್ಲಾ ಹಾಲು ಒಕ್ಕೂಟಗಳು ಜಾನುವಾರುಗಳಿಗೆ ತಗಲುವ ಚರ್ಮರೋಗ ನಿವಾರಣೆಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಾಲು ಒಕ್ಕೂಟಗಳ ಮೂಲಕವೇ ಗಂಟುರೋಗ ನಿವಾರಣೆಗೆ ಅವಶ್ಯಕತೆಯಿರುವ ಆರ್ಥಿಕ ಸಂಪನ್ಮೂಲಗಳನ್ನು ಹಾಲು ಒಕ್ಕೂಟಗಳಿಗೆ ಒದಗಿಸಲು ಕ್ರಮಕೈಗೊಳ್ಳಬೇಕು. ಸರ್ಕಾರ ಕೂಡಲೇ ಮೇವಿನ ಕೇಂದ್ರಗಳನ್ನು ತೆರೆದು ಮೇವು ಪೂರೈಸಲು ಕ್ರಮಕೈಗೊಳ್ಳಬೇಕು. ಹಾಲಿನ ಇಳುವರಿ ಜಾಸ್ತಿ ಮಾಡುವ ನಿಟ್ಟಿನಲ್ಲಿ ಮುಂದಿನ ಆರು ತಿಂಗಳಾದರೂ ಪಶು ಆಹಾರಕ್ಕೆ ಶೇ.೫೦ ಸಬ್ಸಿಡಿ ನೀಡಿ ರೈತರ ಸಂಕಷ್ಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸಬೇಕು. ಇಂತಹ ಸಂಕಷ್ಟ ಕಾಲದಲ್ಲಿ ಇಡೀ ರಾಜ್ಯದ ಎಲ್ಲಾ ರಾಸುಗಳಿಗೆ ‘ರಾಸು ವಿಮೆ’ಯ ಪೂರ್ತಿ ಹಣವನ್ನು ಹಾಲು ಒಕ್ಕೂಟಗಳ ಮೂಲಕ ರಾಜ್ಯ ಸರ್ಕಾರವೇ ಭರಿಸಿ ಸಣ್ಣ, ಅತಿ ಸಣ್ಣ ರೈತರ ಕುಟುಂಬಗಳ ಆರ್ಥಿಕ ನಿರ್ವಾಹಣೆಗೆ ಉಪಕಸುಬಾಗಿಸಿಕೊಂಡಿರುವ ಹೈನುಗಾರಿಕೆಯನ್ನು ಪ್ರೋತ್ಸಾಹಿಸಬೇಕೆಂದು ಎಂದು ಎಂ.ಆರ್.ವೆಂಕಟೇಶ್ ಆಗ್ರಹಿಸಿದ್ದಾರೆ.