ವಿಜಯಪುರ: ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪಿಸುವುದು ಮತ್ತು ಪಿಪಿಪಿ ಮಾದರಿಯನ್ನು ಕೈಬಿಡಲು ಆಗ್ರಹಿಸಿ ‘ಸರ್ಕಾರಿ ವೈದ್ಯಕೀಯ ಕಾಲೇಜ್’ ಹೋರಾಟ ಸಮಿತಿಯಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಶನಿವಾರ 11ನೇ ದಿನಕ್ಕೆ ಕಾಲಿರಿಸಿದ್ದು, ಮಳೆಯ ಆರ್ಭಟದ ನಡುವೆಯೂ ಧರಣಿ ಮುಂದುವರಿದಿದೆ.
ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ನಡೆಯುತ್ತಿರುವ ಧರಣಿಗೆ ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳ ಮುಖಂಡರು, ಸಂಘ ಮತ್ತು ಸಂಸ್ಥೆಗಳು ಬೆಂಬಲ ಸೂಚಿಸುತ್ತಿದ್ದು, ದಿನದಿಂದ ದಿನಕ್ಕೆ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಜಿಲ್ಲಾದ್ಯಂತ ವ್ಯಾಪಕ ಜಾಗೃತಿ ಉಂಟಾಗಿದ್ದು, ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಲೆಂದೇ ಪ್ರಜ್ಞಾವಂತರು ಆಗಮಿಸುತ್ತಿರುವುದು ವಿಶೇಷ.
ಶನಿವಾರ ಧರಣಿಗೆ ಬೆಂಬಲ ಸೂಚಿಸಿದ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಬಬಲೇಶ್ವರ ತಾಲ್ಲೂಕು ಅಧ್ಯಕ್ಷ ಸುರೇಶ ಕಿರಸೂರ ಮಾತನಾಡಿ, ಸರ್ಕಾರಕ್ಕೆ ಹಣದ ಕೊರತೆಯೇನೂ ಇಲ್ಲ, ನಮ್ಮ ಜಿಲ್ಲೆಯ ಸಚಿವದ್ವಯರು ಹಾಗೂ ಶಾಸಕರುಗಳು ಕೂಡಲೇ ಖಾಸಗಿ ಸಹಭಾಗಿತ್ವವನ್ನು ಕೈಬಿಟ್ಟು ಸರ್ಕಾರದಿಂದಲೇ ವೈದ್ಯಕೀಯ ಕಾಲೇಜು ಸ್ಥಾಪಿಸಲು ಶ್ರಮಿಸಬೇಕು. ಆ ಮೂಲಕ ತಮ್ಮ ಬದ್ಧತೆ ಪ್ರದರ್ಶಿಸಬೇಕೆಂದರು.
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದ ರಾಜ್ಯಾಧ್ಯಕ್ಷ ವಿ.ಕೃಷ್ಣೆಗೌಡ, ಲಿಂಗರಾಜ ಬಿದರಕುಂದಿ, ಜಿಲ್ಲಾ ಉಪಾಧ್ಯಕ್ಷ ಬಾಪುಗೌಡ ಪಾಟೀಲ, ಪ್ರಭು ಮಂಕಣಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವು ಕಂಬಾರ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಂಕೇತ ಪಟ್ಟದ, ಜಿಲ್ಲಾ ಕಾರ್ಯಾಧ್ಯಕ್ಷ ಬಸಲಿಂಗಪ್ಪ ಕಪಾಳಿ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಎಂ.ಆರ್. ಗುರಿಕಾರ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಯಶ್ರೀ ಸಾಹುಕಾರ, ರೈತ ಸಂಘಟನೆಯ ಪದಾಧಿಕಾರಿಗಳಾದ ಬಸವರಾಜ ರೆಡ್ಡಿ, ರಂಗಪ್ಪ ಹೂಗಾರ, ಗಿರಿಮಲ್ಲಪ್ಪ ಜಂಬಗಿ, ಪ್ರಕಾಶ ಬಿರಾದಾರ, ಅರವಿಂದ ಕುಲಕರ್ಣಿ, ಭಗವಾನ್ ರೆಡ್ಡಿ, ಅನಿಲ ಹೊಸಮನಿ, ಲಲಿತಾ ಬಿಜ್ಜರಗಿ, ಗೀತಾ ಎಚ್, ನೀಲಾಂಬಿಕಾ ಬಿರಾದಾರ, ಫಯಾಜ್ ಕಲಾದಗಿ ಮತ್ತಿತರರಿದ್ದರು.