ಭೂಮಿ-ವಸತಿ ಹಕ್ಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದಸಂಸ(ಅಂಬೇಡ್ಕರ್ ವಾದ)ತಾಲೂಕು ಸಮಿತಿಯಿಂದ ತಾಲೂಕು ಕಚೇರಿಯ ಡಾ.ಅಂಬೇಡ್ಕರ್ ಪ್ರತಿಮೆ ಮುಂದೆ ಪ್ರತಿಭಟನಾ ಧರಣಿ ನಡೆಸಲಾಯಿತು. 
ಜಿಲ್ಲೆ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

ಬೇಲೂರು: ಭೂಮಿ-ವಸತಿ ಹಕ್ಕು ಮತ್ತು ಇತರ ಹಕ್ಕೊತ್ತಾಯ ಸೇರಿದಂತೆ ಸ್ಥಳೀಯ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ದಸಂಸ (ಅಂಬೇಡ್ಕರ್ ವಾದ)ತಾಲೂಕು ಸಮಿತಿ ಕಾರ್ಯಕರ್ತರು ಶುಕ್ರವಾರ ಪಟ್ಟಣದ ತಾಲೂಕು ಕಚೇರಿ ಎದುರಿನ ಡಾ.ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನಾ ಧರಣಿ ನಡೆಸಿ ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಮೂಲಕ ಸಿಎಂಗೆ ಮನನವಿ ಪತ್ರ ಸಲ್ಲಿಸಿದರು.

ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ರಾಜ್ಯ ಸಮಿತಿ ಸದಸ್ಯ ಅಂಬುಗ ಮಲ್ಲೇಶ್ ಮಾತನಾಡಿ, ಭೂಮಿ ಉಳುಮೆ ಮಾಡಿ ಬದುಕು ಕಟ್ಟಿಕೊಂಡ ಸಾವಿರಾರು ಕುಟುಂಬಗಳು ಬಗರ್ ಹುಕುಂನಲ್ಲಿ 50,53,57 ಹಾಗೂ 94/ಸಿ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅಧಿಕಾರಿಗಳು, ಬಗರ್ ಹುಕುಂ ಸಮಿತಿ ಉಳ್ಳವರಿಗೆ, ರಾಜಕೀಯ ಪ್ರಭಾವಿಗಳಿಗೆ ಸಾಗುವಳಿ ನೀಡಿ ದಲಿತರ ಭೂಮಿ ಕಿತ್ತುಕೊಳ್ಳುವ ಹುನ್ನಾರ ನಡೆಸುತ್ತಿದೆ. 50 ವರ್ಷಗಳಿಂದ ಉಳುಮೆ ಮಾಡಿಕೊಂಡ ಬಂದ ದಲಿತರ ಭೂಮಿಗೆ ಸಾಗುವಳಿ ನೀಡಲು ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಸಂಸ (ಅಂಬೇಡ್ಕರ್‌ವಾದ) ಅಧ್ಯಕ್ಷ ಮಾವಳ್ಳಿ ಶಂಕರ್ ಅವರು ಬಡವರಿಗೆ, ದಲಿತರಿಗೆ ಭೂಮಿ ಸಿಗಬೇಕೆಂಬ ನಿಟ್ಟಿನಲ್ಲಿ ಕಂದಾಯ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ, ರಾಜ್ಯ ವ್ಯಾಪ್ತಿ ಏಕಕಾಲದಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ. ಸರ್ಕಾರ ಹೋರಾಟವನ್ನು ಹಗುರವಾಗಿ ತೆಗೆದುಕೊಳ್ಳದೇ ಅರ್ಹರಿಗೆ ಭೂಮಿ ಕೊಡಲು ಮುಂದಾಗಬೇಕು ಎಂದರು.

ದಸಂಸ(ಅಂಬೇಡ್ಕರ್ ವಾದ)ವಿಭಾಗಿಯ ಸಂಘಟನಾ ಸಂಚಾಲಕ ಲಕ್ಷ್ಮಣ್ ಮಾತನಾಡಿ, ಡಾ.ಅಂಬೇಡ್ಕರ್ ಅವರ ಸೈದ್ಧಾಂತಿಕ ನೆಲೆಯಲ್ಲಿ ದಲಿತ ಸಂಘಟನೆ ಭೂಮಿ, ಶಿಕ್ಷಣ, ಉದ್ಯೋಗ, ಮನುಷ್ಯನ ಮೂಲಭೂತ ಅವಶ್ಯಕತೆಗಾಗಿ ನಿರಂತರ ಸಂಘರ್ಷ ನಡೆಸುತ್ತಿದೆ. 4 ದಶಕಗಳಿಂದ ದಲಿತರ ಭೂಮಿಗಾಗಿ ನಡೆಸಿದ ಹೋರಾಟದಿಂದ ದರಖಾಸ್ತು ಜಮೀನು ಮಂಜೂರು ಮಾಡುವ ಕಾಯ್ದೆ ಜಾರಿಗೆ ತಂದಿತ್ತು. 70ರ ದಶಕದಲ್ಲಿ ಪಿಟಿಸಿಎಲ್ ಕಾಯ್ದೆ ಜಾರಿಗೆ ಬಂದಿದ್ದರೂ ಜಾತಿವಾದಿಗಳ, ಅಧಿಕಾರ ಶಾಹಿ ಸರ್ಕಾರಗಳ ಕುತಂತ್ರದಿಂದ ಪಿಟಿಸಿಎಲ್ ಪ್ರಕರಣಗಳಲ್ಲಿ ದಲಿತರು ಕೋರ್ಟ್‌ಗೆ ಅಲೆಯುತ್ತಿದ್ದಾರೆ. 80ರ ದಶಕದಲ್ಲೆ ದಸಂಸ ಹೆಂಡ ಬೇಡ ಭೂಮಿ ಬೇಕು ಎಂಬ ಘೋಷಣೆ ಮೊಳಗಿಸಿತು. ಜಮೀನು ಸಾಗುವಳಿ ಮಾಡುತ್ತಿರುವ ದಲಿತರನ್ನು ಅರಣ್ಯಭೂಮಿ/ಸಾಮಾಜಿಕ ಅರಣ್ಯೀಕರಣ/ಗೋಮಾಳಕ್ಕೆ ಕಾಯ್ದಿರಿಸುವ ನೆಪದಲ್ಲಿ ಒಕ್ಕಲೆಬ್ಬಿಸುವುದ ಕೈಬಿಟ್ಟು, ಸರ್ಕಾರ ಬಗರ್ ಹುಕುಂ ಹಾಗೂ 94/ಸಿನಲ್ಲಿ ಅರ್ಜಿ ಸಲ್ಲಿಸಿರುವ ಎಲ್ಲ ಅರ್ಹರಿಗೂ ಭೂಮಿ, ಮನೆ ಮಂಜೂರು ಮಾಡಿ ಹಕ್ಕುಪತ್ರ ವಿತರಿಸಬೇಕೆಂದು ಒತ್ತಾಯಿಸಿದರು.

ತಾಲೂಕು ಪ್ರಗತಿಪರ ಸಂಘಟನೆಗಳ ಮುಖಂಡ ಕೆ.ಸುದರ್ಶನ್, ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಎಸ್.ಎಂ.ರಾಜು, ಕಾರ್ಯದರ್ಶಿ ಮಂಜುನಾಥ್ ದಸಂಸ(ಅಂಬೇಡ್ಕರ್‌ವಾದ) ಕಲಾಮಂಡಳಿ ಸಂಚಾಲಕ ಡಾ.ಹರೀಶ್, ಜಿಲ್ಲಾ ಸಂ.ಸಂಚಾಲಕ ಹೋಯ್ಸಳ, ಜಿಲ್ಲಾ ಸಮಿತಿ ಸದಸ್ಯರಾದ ನಿಂಗರಾಜು, ಕೃಷ್ಣಯ್ಯ, ದಲಿತ ಮುಂಡರಾದ ನಿಂಗರಾಜು ಚುಂಗನಹಳ್ಳಿ, ಪ್ರವೀಣ್, ಮಲ್ಲಿಕಾರ್ಜುನ್, ಸತೀಶ್ ಟೈಲರ್, ಆಟೋ ಲಕ್ಷ್ಮಣ್, ಮಲ್ಲೇಶ್, ಚಂದ್ರಪ್ಪ, ಉಮೇಶ್, ನಿಂಜರಾಜು ರಾಜಗೆರೆ, ಸ್ವಾಮಿ ಇತರರಿದ್ದರು.