ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಚಡಚಣ ಪಪಂ ಎದುರು ಪೌರ ನೌಕರರು ಹಾಗೂ ಪೌರ ಕಾರ್ಮಿಕರು ಮುಷ್ಕರ ಕೈಗೊಂಡಿರುವುದು. 
ಜಿಲ್ಲೆ

ಬೇಡಿಕೆಗಳ ಈಡೇರಿಕೆಗೆ ಆಗ್ರಹ

Vijayapura - Desk - Gurappa Lokuri

ಚಡಚಣ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಪಪಂ ಪೌರ ನೌಕರರು ಹಾಗೂ ಪೌರ ಕಾರ್ಮಿಕರು ಮಂಗಳವಾರದಿಂದ ಆರಂಭಿಸಿರುವ ಮುಷ್ಕರ ಗುರುವಾರ ಮೂರನೇ ದಿನ ಕಾಲಿಟ್ಟಿದ್ದು, ಪಟ್ಟಣದ ವಿವಿಧೆಡೆ ಕಸದ ರಾಶಿಯೇ ಬಿದ್ದಿದೆ.

ಮುಷ್ಕರದ ಹಿನ್ನೆಲೆಯಲ್ಲಿ ಪಟ್ಟಣದ ಮೂಲೆ ಮೂಲೆಗಳಲ್ಲಿ, ಪ್ರಮುಖ ರಸ್ತೆ ಹಾಗೂ ಬಸ್ ನಿಲ್ದಾಣ ಪರಿಸರಗಳಲ್ಲಿ ಕಸದ ರಾಶಿ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ.

ದಲಿತ ಸಂಘಟನೆ ಅಧ್ಯಕ್ಷ ಧಶರಥ ಬನಸೋಡೆ ಅವರು ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿ, ಪೌರ ಕಾರ್ಮಿಕರು ಒಂದು ದಿನ ಕೆಲಸ ಮಾಡದಿದ್ದರೂ ಊರಿನ ಪರಿಸ್ಥಿತಿ ಬದಲಾಗುತ್ತದೆ. ನೀರು ಪೂರೈಕೆದಾರರೂ ಇಂತಹ ಹಂತಕ್ಕೆ ಬಂದರೆ ಜನತೆಗೆ ಬಹುದೊಡ್ಡ ತೊಂದರೆಯಾಗಬಹುದು. ಸರ್ಕಾರ ಇಂತಹ ಜೀವದಾಯಕ ಸೇವೆ ಮಾಡುವವರ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕು ಎಂದು ತಿಳಿಸಿದರು.

ಚಡಚಣ ಪಟ್ಟಣ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದೆ. ಆದರೆ, ಆ ಅನುಪಾತದಲ್ಲಿ ಪೌರ ಕಾರ್ಮಿಕರನ್ನು ನೇಮಕ ಮಾಡಲಾಗುತ್ತಿಲ್ಲ. ಸದ್ಯದ ಕಾರ್ಮಿಕರಿಗೆ 16 ವಾರ್ಡ್‌ಗಳಲ್ಲಿ ಸ್ವಚ್ಛತೆ ಕೈಗೊಳ್ಳುವುದು ಹೊರೆ ಆಗುತ್ತಿದೆ. ಹೀಗಾಗಿ ಸರ್ಕಾರ ಹೆಚ್ಚಿನ ಪೌರಕಾರ್ಮಿಕರನ್ನು ನೇಮಕ ಮಾಡಬೇಕಿದೆ. ಜೊತೆಗೆ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವವರನ್ನು ಕಾಯಂಗೊಳಿಸಬೇಕೆಂದು ಒತ್ತಾಯಿಸಿದರು.

ಮುಷ್ಕರ ಮುಂದುವರಿದರೆ ನಗರದಲ್ಲಿ ಕಸದ ಸಮಸ್ಯೆ ಗಂಭೀರವಾಗುವ ಸಾಧ್ಯತೆಯಿದ್ದು, ಕೂಡಲೇ ಸರ್ಕಾರ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಪಪಂ ಅಧ್ಯಕ್ಷ ಮಲ್ಲಿಕಾರ್ಜುನ ದೋತ್ರೆ, ಉಪಾಧ್ಯಕ್ಷ ಇಲಾಹಿ ನದಾಫ್ ಮತ್ತಿತರರು ಭಾಗವಹಿಸಿದ್ದರು.