ವಿಜಯವಾಣಿ ಸುದ್ದಿಜಾಲ ಧಾರವಾಡ
ಮೆಕ್ಕೆಜೋಳಕ್ಕೆ ಕೂಡಲೇ 3000 ರೂ. ಬೆಂಬಲ ಬೆಲೆ ನೀಡಿ ಖರೀದಿಸುವಂತೆ ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಜಿಲ್ಲೆಯ ಕಲಘಟಗಿ ಮತ್ತು ಅಳ್ನಾವರ ತಾಲೂಕಿನ ರೈತರು ಮೆಕ್ಕೆಜೋಳವನ್ನೇ ಪ್ರಮುಖ ಬೆಳಯಾಗಿ ಬೆಳೆಯುತ್ತಿದ್ದಾರೆ. ಇದೇ ಅವರ ಜೀವನಕ್ಕೆ ಆಧಾರ. ಕಳೆದ ವರ್ಷ ಬರಗಾಲದಿಂದ ಬೆಳೆ ಮಣ್ಣು ಪಾಲಾಗಿತ್ತು. ಈ ವರ್ಷ ಉತ್ತಮ ಮಳೆಯಿಂದ ಹೆಚ್ಚಿನ ಫಸಲು ಪಡೆಯುವ ನಿರೀಕ್ಷೆಯಲ್ಲಿದ್ದ ರೈತರಿಗೆ ಅಕಾಲಿಕ ಮಳೆ ನಿರಾಸೆ ಉಂಟು ಮಾಡಿದೆ. ಇಂತಹ ಸಮಯದಲ್ಲಿ ಕೈಗೆ ಬಂದ ಮೆಕ್ಕೆಜೋಳಕ್ಕೆ ಕಳೆದ ವಾರ 3000 ರೂ. ದಿಂದ 3200 ವರೆಗೆ ಮಾರಾಟವಾಗಿತ್ತು. ಈಗ 1800-2000 ರೂ. ಕೇಳುತ್ತಿದ್ದರಿಂದ ರೈತರು ಚಿಂತೆಗೀಡಾಗಿದ್ದಾರೆ. ಹೀಗಾಗಿ ಕ್ವಿಂಟಲ್ಗೆ ಕನಿಷ್ಠ 3000 ರೂ. ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.
ಬೆಲೆ ನಿಗದಿ ಜತೆಗೆ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭ, ಸೂಟ್ ಮುರಿಯುವುದನ್ನು ನಿಲ್ಲಿಸಬೇಕು. ಮೆಕ್ಕೆಜೋಳ ಬೆಳೆ ನಷ್ಟ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದರು. ನಂತರ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿಪತ್ರ ರವಾನಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷೆ ದೀಪಾ ಧಾರವಾಡ, ಗಂಗಾಧರ ಜಾಧವ, ಶರಣು ಗೋನವಾರ, ಹನುಮೇಶ ಹುಡೇದ, ರಾಣಪ್ಪ ಸಾವಂತ್ನವರ, ಮಲ್ಲಪ್ಪ ಮನ್ಸೂರ, ನಾಗಪ್ಪ, ಹುಸೇನ್ಸಾಬ್, ರೈತರು, ಇತರರು ಇದ್ದರು.