ಜಿಲ್ಲೆ

ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹ

ಬಳ್ಳಾರಿ : ರಾಜ್ಯದಲ್ಲಿ ‌ಖಾಲಿಯಿರುವ 2.84 ಲಕ್ಷಕ್ಕೂ ಹುದ್ದೆಗಳ ಭರ್ತಿಗೆ ಆಗ್ರಹಿಸಿ, ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯಿಂದ ಯುವ ಜನರ ಬೃಹತ್ ಹೋರಾಟವು ಇಲ್ಲಿನ ನಾರಾಯಣ್ ರಾವ್ ಪಾರ್ಕ್ ನಿಂದ ಡಿಸಿ ಕಚೇರಿ ಮೆರವಣಿಗೆ ನಡೆಸಿ, ಎಡಿಸಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಎಐಡಿವೈಒ ರಾಜ್ಯಾಧ್ಯಕ್ಷ ಶರಣಪ್ಪ ಊದ್ಯಾಳ್ ಮಾತನಾಡಿ, ಸರ್ಕಾರ‌ ನೇಮಕಾತಿಯಲ್ಲಿ ಕನಿಷ್ಠ ಐದು ವರ್ಷ ವಯೋಮಿತಿ ಸಡಿಲಿಸಿ ಮತ್ತು ನೇಮಕಾತಿಯಲ್ಲಿನ ಭ್ರಷ್ಟಾಚಾರ ತಡೆಗಟ್ಟಿ ಪಾರದರ್ಶಕತೆಯನ್ನು ಕಾಪಾಡಲು ಕ್ರಮ ಕೈಗೊಳ್ಳ ಬೇಕು. ಅಲ್ಲದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿನ ಎಲ್ಲ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು. ರಾಜ್ಯದಲ್ಲಿ ನಾಲ್ಕೈದು ವರ್ಷಗಳಿಂದ ಸರಿಯಾಗಿ ನೇಮಕಾತಿ ನಡೆಯದ ಹಿನ್ನೆಲೆ ಎಲ್ಲ ನೇಮಕಾತಿಗಳಲ್ಲಿ ಅರ್ಹ ವಯೋಮಿತಿ ಸಡಿಲಗೊಳಿಸಬೇಕು. ಪೊಲೀಸ್ ಪೇದೆ ನೇಮಕಾತಿಯಲ್ಲಿ ಜಿಎಂ, ಒಬಿಸಿ 30, ಎಸ್ ಸಿ, ಎಸ್ ಟಿ ಹಾಗೂ ಕೆಟಗಿರಿ ಒಂದಕ್ಕೆ 33 ವರ್ಷಗಳಿಗೆ ಹೆಚ್ಚಿಸಬೇಕು‌. ಸರ್ಕಾರಿ ಇಲಾಖೆಗಳಲ್ಲಿ ದಿನಗೂಲಿ, ಗುತ್ತಿಗೆ, ಹೊರ ಗುತ್ತಿಗೆ ಪದ್ಧತಿ ಕೈಬಿಟ್ಟು ಎಲ್ಲ ಹುದ್ದೆಗಳನ್ನು ಕಾಯಂ ಆಧಾರದಲ್ಲಿ ನೇಮಕಾತಿ ಮಾಡಬೇಕು. ಇತ್ತೀಚಿಗೆ ಕೆಇಎ ಹೊರಡಿಸಿರುವ ನೋಟಿಫಿಕೇಶನ್ ನಲ್ಲಿ ದುಬಾರಿ ಅರ್ಜಿ ಶುಲ್ಕವನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು. ಕೂಡಲೇ ಕ್ರಮವಹಿಸಿದ್ದರೆ ಮುಂದಿನ ದಿನಗಳಲ್ಲಿ ಉಗ್ರಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ‌ನೀಡಿದರು. ಬಳಿಕ ಎಡಿಸಿ ಮಹಮ್ಮದ್ ಎನ್.ಜುಬೇರ್ ಮೂಲಕ ರಾಜ್ಯ ಸರ್ಕಾರ ಕ್ಕೆ ಮನವಿ ಸಲ್ಲಿಸಿದರು.