ಜಿಲ್ಲೆ

ಇ ಸರ್ವೆಯಿಂದ ಮುಕ್ತಗೊಳಿಸಲು ಒತ್ತಾಯ

ಹಿರೇಕೆರೂರ: ಆರೋಗ್ಯ ಇಲಾಖೆಯ ಇ ಸರ್ವೆಯಿಂದ ಮುಕ್ತಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ವತಿಯಿಂದ ಪಟ್ಟಣದ ಸಿಡಿಪಿಒ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ, ಇಲಾಖೆ ಮೇಲ್ವಿಚಾರಕಿ ಶೈಲಾ ಬಿ.ಎಸ್. ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಫೆಡರೇಷನ್ ತಾಲೂಕು ಅಧ್ಯಕ್ಷೆ ಕುಸುಮಾ ಪಾಟೀಲ ಮಾತನಾಡಿ, ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 4 ವರ್ಷಗಳ ಹಿಂದೆ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಲಾಗಿರುವ ಮೊಬೈಲ್ ಬಹುತೇಕ ಹಾಳಾಗಿವೆ. ಮೊಬೈಲ್‌ಗಳಲ್ಲಿ ಮಾಹಿತಿ ಸಂಗ್ರಹ ಸೇರಿದಂತೆ ಮತ್ತಿತರೆ ಕೆಲಸ ನಿರ್ವಹಿಸುವುದು ಕಷ್ಟಕರವಾಗಿದೆ. ಆರೋಗ್ಯ ಸಮೀಕ್ಷೆ ಅಪಲೋಡ್ ಮಾಡುವಂತೆ ಒತ್ತಡ ಹೇರಲಾಗುತ್ತಿದೆ. ಸಮೀಕ್ಷೆ ಮಾಡದೇ ಹೋದರೆ ಅಮಾನತು ಮಾಡುವುದಾಗಿ ಬೆದರಿಕೆ ಹಾಕಲಾಗುತ್ತಿದೆ. ಇನ್ನು ಮುಂದೆ ಬೇರೆ ಇಲಾಖೆ ಕೆಲಸಗಳಿಗೆ ಅಂಗನವಾಡಿ ಕಾರ್ಯಕರ್ತೆಯರನ್ನು ಬಳಸಿಕೊಳ್ಳಬಾರದು. ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾಕಿ ಉಳಿದಿರುವ 6 ತಿಂಗಳ ಬಾಡಿಗೆ ಹಣ ಬಿಡುಗಡೆಗೊಳಿಸಬೇಕು. ಸರ್ಕಾರ ಘೋಷಿಸಿರುವ 6 ನೇ ಗ್ಯಾರಂಟಿಯಾದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ 15 ಮತ್ತು 10 ಸಾವಿರ ರೂಪಾಯಿಗೆ ಗೌರವಧನ ಹೆಚ್ಚಳ ಮಾಡುವುದು ಹಾಗೂ ನಿವೃತ್ತಿಯಾದವರಿಗೆ 3 ಲಕ್ಷ ರೂಪಾಯಿ ನೀಡಬೇಕು ಎಂದು ಆಗ್ರಹಿಸಿದರು.

ಫೆಡರೇಷನ್ ಉಪಾಧ್ಯಕ್ಷೆ ಫರೀದಾಬಾನು ಪಾಟೀಲ, ಕಾರ್ಯದರ್ಶಿ ಪಾರ್ವತಿ ಹಾದ್ರಿಹಳ್ಳಿ, ಖಜಾಂಚಿ ಸುನೀತಾ ಮರ್ಕಳ್ಳಿ, ಪ್ರೇಮಾ ಸಿದ್ದಪ್ಪಗೌಡ್ರ, ಚಂದ್ರಕಲಾ ಯತ್ನಳ್ಳಿ, ನೀಲಮ್ಮ ವೀರಾಪುರ, ರೇಷ್ಮಾ ಪುರ್ತಗೇರಿ, ನಿರ್ಮಲಾ ಎಂ.ಡಿ., ರೇಣುಕಾ ಹಿತ್ತಲಮನಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಇದ್ದರು.