ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಕರ್ನಾಟಕ ಜಲ ಸಂಪನ್ಮೂಲ ವಿಶ್ವ ವಿದ್ಯಾಲಯ ಸ್ಥಾಪನೆ ಮಾಡಬೇಕು ಎಂದು ಮುಖ್ಯಮಂತ್ರಿ ಸೇರಿ ಸಂಬಂಧಿಸಿದ ಎಲ್ಲ ಸಚಿವರಿಗೆ ಮನವಿಪತ್ರ ಸಲ್ಲಿಸಿ ಆಗ್ರಹಿಸಲಾಗಿದೆ. ಘೋಷಣೆ ಮಾಡುವ ಭರವಸೆ ಸಹ ಇದೆ ಎಂದು ಭಾರತ ಏಕತಾ ಆಂದೋಲನದ ಕಾರ್ಯಾಧ್ಯಕ್ಷ ಮಹಾದೇವ ಹೊರಟ್ಟಿ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹವಾಮಾನ ವೈಪರಿತ್ಯ ಸೇರಿ ಅನೇಕ ಕಾರಣಗಳಿಂದ ಪ್ರಸ್ತುತ ದಿನಗಳಲ್ಲಿ ನೀರಿನ ಸಮಸ್ಯೆ ಸಾಕಷ್ಟು ಎದುರಾಗುತ್ತಿದೆ. ಈ ಎಲ್ಲ ಸವಾಲುಗಳನ್ನು ಎದುರಿಸಲು ರಾಜ್ಯದಲ್ಲಿ ಬೃಹತ್, ಸಮಗ್ರ, ಸಮರ್ಥ ಹಾಗೂ ಬಹುಶಿಸ್ತೀಯ ಕರ್ನಾಟಕ ಜಲ ಸಂಪನ್ಮೂಲ ವಿವಿಯ ಸ್ಥಾಪನೆ ಅಗತ್ಯವಾಗಿದೆ. ಹೀಗಾಗಿ ವಾಲ್ಮಿಯಲ್ಲಿ ಇದನ್ನು ಸ್ಥಾಪಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಬಜೆಟ್ನಲ್ಲಿ ಮುಖ್ಯಮಂತ್ರಿ ಘೋಷಣೆ ಮಾಡುವ ಭರವಸೆ ಸಹ ಇದೆ ಎಂದರು.
ವಾಲ್ಮಿ ಮಾಜಿ ನಿರ್ದೇಶಕ ರಾಜೇಂದ್ರ ಪೋದ್ದಾರ ಮಾತನಾಡಿ, 2030ರ ವೇಳೆಗೆ ಜಾಗತಿಕ ಹಾಗೂ ಸ್ಥಳಿಯವಾಗಿ ಅತ್ಯಂತ ಗಂಭೀರವಾಗಿ ನೆಲ-ಜಲ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳಿವೆ. ಹವಾಮಾನ ವೈಪರಿತ್ಯದಿಂದ ಇನ್ನಷ್ಟು ಉಲ್ಬಣವಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಮುಂದಿನ 20 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕೆಲಸವಾಗಬೇಕು ಎಂದರು.
ವಾಲ್ಮಿ ಸಂಸ್ಥೆಯು ಜಲ ಸಂಪನ್ಮೂಲ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಲು ಬೇಕಾಗುವ ಎಲ್ಲ ಸೌಲಭ್ಯಗಳನ್ನು ಹೊಂದಿರುವುದರಿಂದ ಸರ್ಕಾರಕ್ಕೆ ಹೆಚ್ಚಿನ ಹಣಕಾಸಿನ ಹೊರೆಯಾಗುವುದಿಲ್ಲ. ವಿವಿಯಿಂದ ಬಿಟೆಕ್, ಎಂಟೆಕ್ ಪದವಿಗಳನ್ನು, ಪ್ರಮಾಣಪತ್ರ ಹಾಗೂ ಡಿಪ್ಲೋಮಾ ಕೋರ್ಸ್ಗಳನ್ನು ಆರಂಭಿಸಬಹುದು. ಇದರಿಂದ ವಿಶಿಷ್ಟ ತಾಂತ್ರಿಕ ಪರಿಣಿತರು ಹಾಗೂ ಪದವೀಧರರನ್ನು ಜಾಗತಿಕ ಮಟ್ಟದಲ್ಲಿ ನೀಡಬಹುದು. ಉದ್ಯೋಗ ಸೃಷ್ಟಿಗೂ ಅವಕಾಶಗಳಿವೆ ಎಂದರು.
ಡಿ.ಪಿ. ಬಿರಾದಾರ, ಇತರರು ಇದ್ದರು.