ಜಿಲ್ಲೆ

ಹೈನುಗಾರರ ಪ್ರೋತ್ಸಾಹ ಧನ ಶೀಘ್ರ ಬಿಡುಗಡೆ ಒತ್ತಾಯ

ಉಡುಪಿ: ರಾಜ್ಯ ಸರ್ಕಾರದಿಂದ ಕಳೆದ 8 ತಿಂಗಳಿಂದ ರಾಜ್ಯದ ಹೈನುಗಾರರಿಗೆ ಸುಮಾರು 1100 ಕೋಟಿ ಪ್ರೋತ್ಸಾಹ ಧನ ಬಾಕಿಯಾಗಿದ್ದು, ಇದನ್ನು ಏಕಕಂತಿನಲ್ಲಿ ಬಿಡುಗಡೆ ಮಾಡುವಂತೆ ಉಡುಪಿ ಶಾಸಕ ಯಶ್​ ಪಾಲ್​ ಸುವರ್ಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಅಗ್ರಹಿಸಿದ್ದಾರೆ.

ರಾಷ್ಟ್ರದಲ್ಲಿ ಎರಡನೇ ಅತೀ ದೊಡ್ಡ ಹಾಲು ಉತ್ಪಾದಕ ಕರ್ನಾಟಕ ಹಾಲು ಮಹಾ ಮಂಡಳ ಆಶ್ರಯದಲ್ಲಿ 15 ಒಕ್ಕೂಟಗಳು ಕಾರ್ಯಾಚರಿಸುತ್ತಿದೆ. ಈ ಒಕ್ಕೂಟಗಳಡಿಯಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಹಾಲು ಉತ್ಪಾದಕರ ಸಹಕಾರಿ ಸಂಘಗಳ 26 ಲಕ್ಷ ಸದಸ್ಯರಿಂದ ಪ್ರತಿನಿತ್ಯ 98 ಲಕ್ಷ ಲೀ. ಹೆಚ್ಚು ಹಾಲು ಶೇಖರಣೆಗೊಳ್ಳುತ್ತಿದೆ. ಮೇವು ಕೊರತೆ, ಪಶು ಆಹಾರ ಬೆಲೆ ಏರಿಕೆ, ಹಸುಗಳಿಗೆ ನಿರಂತರವಾಗಿ ಹಲವು ಸಾಂಕ್ರಾಮಿಕ ಕಾಯಿಲೆಗಳು ಕಂಡುಬರುತ್ತಿದ್ದು, ಕ್ಲಪ್ತ ಸಮಯದಲ್ಲಿ ಚಿಕಿತ್ಸೆಗೆ ಪಶುವೈದ್ಯರ ಕೊರತೆ ಸಹಿತ ಹಲವು ಸಮಸ್ಯೆಗಳನ್ನು ಹೈನುಗಾರರು ಎದುರಿಸುತ್ತಿದ್ದಾರೆ. ಈ ಮಧ್ಯೆ ಹೈನುಗಾರರಿಗೆ ನೀಡಬೇಕಾದ ಲೀಟರ್​ಗೆ 5 ರೂ. ಪ್ರೋತ್ಸಾಹ ಧನ ಬಿಡುಗಡೆ ಮಾಡದೆ ಬಾಕಿ ಉಳಿಸಿಕೊಂಡಿರುತ್ತದೆ. ಮುಂದಿನ ದಿನಗಳಲ್ಲಿ ಈ ಮೊತ್ತ 10 ರೂ.ಗೆ ಏರಿಕೆ ಮಾಡಬೇಕು ಎಂದು ಮುಖ್ಯಮಂತ್ರಿ ಹಾಗೂ ಪಶು ಸಂಗೋಪನೆ ಸಚಿವರನ್ನು ಆಗ್ರಹಿಸಿದ್ದಾರೆ.