ಜಿಲ್ಲೆ

ಅತ್ಯುನ್ನತ ಕನ್ನಡ ಕೇಂದ್ರಕ್ಕೆ ಸ್ವಾಯತ್ತೆ ಶೀಘ್ರ ಈಡೇರಿಸಲು ಆಗ್ರಹ

ಮೈಸೂರು: ನಗರದಲ್ಲಿರುವ ಶಾಸ್ತ್ರೀಯ ಭಾಷಾ ಅತ್ಯುನ್ನತ ಕನ್ನಡ ಕೇಂದ್ರಕ್ಕೆ ಸ್ವಾಯತ್ತೆ ನೀಡಲಾಗುವುದು ಎನ್ನುವ ಕೇಂದ್ರದ ಭರವಸೆ ತಕ್ಷಣ ಆದೇಶವಾಗಬೇಕು ಎಂದು ಕನ್ನಡ ಕ್ರಿಯಾ ಸಮಿತಿ ಹಾಗೂ ಶಾಸ್ತ್ರೀಯ ಭಾಷಾ ಕನ್ನಡ ಹೋರಾಟ ಸಮಿತಿ, ಕೇಂದ್ರ ಸರ್ಕಾರವನ್ನು ಒತ್ತಾಯಿಸಿತು.

ನಗರದ ನೃಪತುಂಗ ಕನ್ನಡ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಸಾಹಿತಿಗಳು, ಕನ್ನಡ ಪರ ಹಾಗೂ ಪ್ರಗತಿಪರ ಸಂಘಟನೆಗಳ ಸದಸ್ಯರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಶಾಸ್ತ್ರೀಯ ಭಾಷಾ ಅತ್ಯುನ್ನತ ಕನ್ನಡ ಕೇಂದ್ರವನ್ನು ಭಾರತೀಯ ಭಾಷಾ ಸಂಸ್ಥೆಯಿಂದ ಪ್ರತ್ಯೇಕಿಸಿ ಸ್ವಾಯತ್ತೆ ನೀಡಿ ಮುಂದುವರಿಸಲಾಗುವುದೆಂಬ ಕೇಂದ್ರ ಸರ್ಕಾರದ ನಿಲುವನ್ನು ಸಭೆ ಸ್ವಾಗತಿಸಿತು. ಅಲ್ಲದೆ ಈ ತೀರ್ಮಾನವು ಕೂಡಲೇ ಆದೇಶವಾಗಿ ಹೊರಬರಬೇಕು ಎಂದು ಸರ್ಕಾರವನ್ನು ಒತ್ತಾಯಿಸಿತು.

ಆದರೆ ಇದೇ ಸಂದರ್ಭದಲ್ಲಿ ಶಾಸ್ತ್ರೀಯ ಭಾಷಾ ಕೇಂದ್ರವನ್ನು ಮೈಸೂರಿನಿಂದ ಬೆಂಗಳೂರಿಗೆ ಸ್ಥಳಾಂತರಗೊಳಿಸಬೇಕೆಂಬ ಆಲೋಚನೆ ಕೈ ಬಿಡಬೇಕು ಎಂದು ಸಭೆ ಒಕ್ಕೊರಲಿನಿಂದ ಒತ್ತಾಯಿಸಿತು.

ಮೈಸೂರಿನಲ್ಲಿ ಪ್ರಾರಂಭವಾಗಿ ಹಲವು ವರ್ಷಗಳೇ ಕಳೆದಿದ್ದು ಈ ಕೇಂದ್ರಕ್ಕೆ ಸ್ವಂತ ಕಟ್ಟಡ ನಿರ್ಮಿಸಲು ಮೈಸೂರು ವಿಶ್ವವಿದ್ಯಾನಿಲಯ ಜಾಗವನ್ನು ಕೊಡುವುದಾಗಿ ಒಪ್ಪಿಗೆ ನೀಡಿದೆ. ಇದಕ್ಕೆ ರಾಜ್ಯ ಸರ್ಕಾರದ ಸಮ್ಮತಿಯ ಆದೇಶವೂ ಆಗಿದೆ. ಹಾಗಾಗಿ ಸ್ಥಳಾಂತರ ಸಾಧುವಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.

ಮೈಸೂರು ನಗರ ಪಾರಂಪರಿಕ ಕೇಂದ್ರವಾಗಿದ್ದು, ವಿದ್ವಾಂಸರ ಬೀಡಾಗಿರುವುದು ಮಾತ್ರವಲ್ಲದೆ ಪ್ರಶಾಂತ ವಾತಾವರಣದ ಸ್ಥಳವಾಗಿದೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಬೆಂಗಳೂರಿಗೆ ವರ್ಗಾಯಿಸುವ ಅಲೋಚನೆಯನ್ನು ಕೈ ಬಿಡಬೇಕೆಂಬ ಒತ್ತಾಯಿಸುವ ನಿರ್ಣಯವನ್ನು ಕೇಂದ್ರ ಸಚಿವ ಧರ್ಮೇಂದ್ರ ಪ್ರಸಾದ್, ಮುಖ್ಯಮಂತ್ರಿ, ಕರ್ನಾಟಕವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಹಾಗೂ ಪ್ರಮುಖ ಲೋಕಸಭಾ, ರಾಜ್ಯಸಭಾ ಸದಸರಿಗೆ ಕಳುಹಿಸಬೇಕು ಎಂದು ತೀರ್ಮಾನಿಸಲಾಯಿತು.

ಅಲ್ಲದೆ ಈ ಸಂಬಂಧ ನಿಯೋಗವೊಂದು ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಸೇರಿದಂತೆ ಸಂಬಂಧಿಸಿದವರನ್ನು ಶೀಘ್ರವೇ ಭೇಟಿ ಮಾಡಿ ಮೈಸೂರಿನಲ್ಲಿ ಕೇಂದ್ರ ಉಳಿಸುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ, ಇದಕ್ಕೆ ಅಂತಿಮ ರೂಪ ನೀಡಲು ಫೆ.8ರಂದು ಇದೇ ಸ್ಥಳದಲ್ಲಿ ಮತ್ತೊಂದು ಸಭೆ ಸೇರಲು ನೆರೆದಿದ್ದವರು ತೀರ್ಮಾನಿಸಿದರು.

ಕನ್ನಡ ಕ್ರಿಯಾ ಸಮಿತಿಯಿಂದ ಸ.ರ ಸುದರ್ಶನ, ಶಾಸ್ತ್ರೀಯ ಕನ್ನಡ ಭಾಷಾ ಹೋರಾಟ ಸಮಿತಿಯ ನಾ. ದಿವಾಕರ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ವಿವಿಧ ಸಂಘಟನೆಗಳ ಪ್ರಮುಖರಾದ ಮ.ಗು.ಸದಾನಂದಯ್ಯ, ಹೊರೆಯಾಲ ದೊರೆಸ್ವಾಮಿ, ಕಾಳೇಗೌಡ ನಾಗವಾರ, ಟಿ.ಎ.ಶಿವಶಂಕರ್, ಅರವಿಂದ ಶರ್ಮಾ, ಸವಿತಾ ಮಲ್ಲೇಶ್, ಪಂಡಿತಾರಾಧ್ಯ, ಜಿ.ಪ್ರಕಾಶ್, ಸಿದ್ದೇಗೌಡ, ರಾಯಣ್ಣ ಇತರರು ಇದ್ದರು.