ಸಕಲೇಶಪುರ: ಕುಡಿಯುವ ನೀರಿಗಾಗಿ ಆಗ್ರಹಿಸಿ ತಾಲೂಕಿನ ಹುರುಡಿ ಗ್ರಾಮಸ್ಥರು ಹಾನುಬಾಳ್ ಗ್ರಾಮ ಪಂಚಾಯಿತಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿ ಕಳೆದ ನಾಲ್ಕು ವರ್ಷದಿಂದ ಕುಡಿಯುವ ನೀರಿನ ಸಮಸ್ಯೆ ಸೃಷ್ಟಿಯಾಗಿದ್ದು, ಸಾಕಷ್ಟು ಬಾರಿ ಮೌಖಿಕವಾಗಿ ಹಾಗೂ ಲಿಖಿತವಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಶಾಸಕರು ಹಾಗೂ ತಾಪಂ ಕಾರ್ಯನಿರ್ವಹಣಾಧಿಕಾರಿಗೆ ದೂರು ನೀಡಿದ್ದರೂ ಪರಿಹಾರ ದೊರಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಬೇಸಿಗೆಯಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಗ್ರಾಮಕ್ಕೆ ನೀರು ಪೊರೈಕೆ ಮಾಡುತ್ತಿದ್ದರು. ಮಳೆಗಾಲದ ಆರಂಭದಲ್ಲಿ ಇವರು ಸಹ ನೀರು ಪೊರೈಕೆಯನ್ನು ಸ್ಥಗಿತಗೊಳಿಸಿದರು. ಪರಿಣಾಮ ಕಳೆದ ಮೂರು ತಿಂಗಳಿನಿಂದ ಮಳೆ ನೀರಿನಿಂದ ಜೀವನ ಸಾಗಿಸಿದ್ದೇವೆ. ಗ್ರಾಮದ ಅರ್ಧ ಭಾಗಕ್ಕೆ ಕುಡಿಯುವ ನೀರು ಪೊರೈಕೆ ಮಾಡಲಾಗುತ್ತಿದೆ. ಆದರೆ ಇದೆ ಗ್ರಾಪಂ ಸದಸ್ಯೆಯೊಬ್ಬರ ಒತ್ತಡಕ್ಕೆ ಮಣಿದಿರುವ ಗ್ರಾಪಂ ಅಧಿಕಾರಿಗಳು ಇದೆ ಜಲಮೂಲದಿಂದ ಇಡಿ ಗ್ರಾಮಕ್ಕೆ ನೀರು ಪೊರೈಸಲು ವಿಫಲರಾಗಿದ್ದಾರೆ. ಪರಿಣಾಮ ಸುಮಾರು 50 ಕ್ಕೂ ಅಧಿಕ ಕುಟುಂಬಗಳು ಕಿಲೋಮೀಟರ್‌ನಿಂದು ನೀರು ಹೊತ್ತು ತರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಉನ್ನತ ಅಧಿಕಾರಿಗಳು ಆಗಮಿಸಿ ಸಮಸ್ಯೆ ಬಗೆಹರಿಸುವವರಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟಹಿಡಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ , ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೊರೈಸುವುದು ಗ್ರಾಪಂ ಮೂಲ ಕರ್ತವ್ಯಗಳಲ್ಲಿ ಒಂದು. ತಾಂತ್ರಿಕ ಕಾರಣಗಳಿಂದಾಗಿ ಸಮರ್ಪಕವಾಗಿ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ. ತಾತ್ಕಾಲಿಕವಾಗಿ ಸಮಸ್ಯೆ ಸೃಷ್ಟಿಯಾಗಿದೆ. ಟ್ಯಾಂಕರ್ ಮೂಲಕ ಗ್ರಾಮಕ್ಕೆ ನೀರು ಪೂರೈಸಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು.
ಪ್ರತಿಭಟನೆ ನೇತೃತ್ವವನ್ನು ಹಾನುಬಾಳ್ ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ರತ್ನಕರ್, ಕಾಂಗ್ರಸ್ ಮುಖಂಡ ದೇವರಾಜ್, ಗ್ರಾಮಸ್ಥರಾದ ಶಿವಕುಮಾರ್ ಮತ್ತಿತರರು ವಹಿಸಿದ್ದರು.