ವಿಜಯಪುರ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ) ಪದಾಧಿಕಾರಿಗಳು ಮನವಿ ಸಲ್ಲಿಸಿದರು. ವಿಜಯ ವಿಠ್ಠಲ ಪೂಜಾರ, ಸಂಗಣ್ಣ ಬಾಗೇವಾಡಿ, ಪೀರು ಕೆರೂರ ಮತ್ತಿತರರಿದ್ದಾರೆ.  
ಜಿಲ್ಲೆ

ಸಚಿವ ತಿಮ್ಮಾಪುರ ವಜಾಗೊಳಿಸಲು ಒತ್ತಾಯ; ಸಿಎಂಗೆ ರೈತರ ಮನವಿ

ವಿಜಯಪುರ: ಆಲಮಟ್ಟಿಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಿಂದ ರೈತರನ್ನು ಹೊರಗಿಟ್ಟಿರುವ ಸಚಿವ ಆರ್.ಬಿ. ತಿಮ್ಮಾಪುರ ನಡೆ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ) ಪದಾಧಿಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಿದ ಪದಾಧಿಕಾರಿಗಳು ಬಳಿಕ ಮಹಾತ್ಮ ಬಸವೇಶ್ವರ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಜಿಲ್ಲಾಡಳಿತ ಕಚೇರಿ ತಲುಪಿ ಸಮಾವೇಶಗೊಂಡರು. ಸಚಿವ ತಿಮ್ಮಾಪುರ ವಿರುದ್ಧ ಘೋಷಣೆ ಕೂಗಿದರು. ಬಳಿಕ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಜಿಲ್ಲಾಧ್ಯಕ್ಷ ವಿಜಯ ವಿಠ್ಠಲ ಪೂಜಾರ ಮಾತನಾಡಿ, 2023 ಆ.21ರಂದು ಆಲಮಟ್ಟಿಯ ಕೃಷ್ಣಾ ಭಾಗ್ಯ ಜಲ ನಿಗಮದ ಕಾರ್ಯಾಲಯದಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ಕರೆಯಲಾಗಿತ್ತು. ಸಚಿವ ಆರ್.ಬಿ. ತಿಮ್ಮಾಪುರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ವಿವಿಧ ಸಚಿವರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಪಾಲ್ಗೊಂಡಿದ್ದರು. ಈ ಸಭೆಗೆ ರೈತರ ನಾಯಕರು ಸಹ ಹಾಜರಾಗಿದ್ದರು. ಆದರೆ, ರೈತ ಮುಖಂಡರನ್ನು ಸಭೆಯಿಂದ ಹೊರಗೆ ಕಳುಹಿಸಿದರು. ಆ ಮೂಲಕ ರೈತರನ್ನು ಅವಮಾನಿಸಿದ್ದಾರೆಂದರು.

ರೈತ ಮುಖಂಡರನ್ನು ಉದ್ದೇಶಿಸಿ ಸಚಿವ ತಿಮ್ಮಾಪುರ ಬಳಸಿದ ಪದ ಅಸಭ್ಯವಾಗಿತ್ತು. ರೈತರನ್ನು ಈ ತೆರನಾಗಿ ಅವಮಾನಿಸಿದ್ದು ಸರಿಯಲ್ಲ. ಅಲ್ಲದೇ, ಬರಗಾಲದಿಂದ ತತ್ತರಿಸಿರುವ ಅವಳಿ ಜಿಲ್ಲೆಗೆ 14 ದಿನ ಚಾಲು ಹಾಗೂ 14 ದಿನ ಬಂದ್ ಪದ್ಧತಿಯಡಿ ವಾರಾಬಂದಿ ಕ್ರಮ ಅನುಸರಿಸಲು ತೀರ್ಮಾನಿಸಲಾಗಿದೆ. ಇದನ್ನು ಬದಲಾಯಿಸಿ 7 ದಿನ ಸಮಾನವಾಗಿ 10 ದಿನ ಬಂದಾದ ನಂತರ ಕಾಲುವೆಗೆ ಮರು ನೀರು ಬಿಟ್ಟರೆ ಕೊನೆಯ ಭಾಗಕ್ಕೆ ನೀರು ತಲುಪಲು 2-3 ದಿನ ಕಾಲಾವಕಾಶ ಬೇಕಾಗುತ್ತದೆ. ಅಷ್ಟರಲ್ಲಿ ಬೆಳೆ ಒಣಗುತ್ತದೆ. ಹೀಗಾಗಿ ಇದೊಂದು ಏಕಪಕ್ಷೀಯ ನಿರ್ಧಾರ. ಇಂಥ ರೈತ ವಿರೋದಿ ಸಚಿವರನ್ನು ಅಧ್ಯಕ್ಷ ಸ್ಥಾನದಿಂದ ತೆರವುಗೊಳಿಸಬೇಕೆಂದರು.

ಮುಖಂಡರಾದ ಸಂಗಣ್ಣ ಬಾಗೇವಾಡಿ, ಪೀರು ಕೆರೂರ, ಮಂಜು ಬಿರಾದಾರ, ಗುರುನಾಥ ನಾಟೀಕಾರ, ಗಂಗಾಧರ ಯಂಕಂಚಿ, ಅಮೋಘಸಿದ್ದ ಯಂಕಂಚಿ, ತಿರುಪತಿ ಬಂಡಿವಡ್ಡರ, ಬಸು ಉಪ್ಪಾರ, ರಾಮನಗೌಡ ಅಂಗಡಗೇರಿ ಮತ್ತಿತರರಿದ್ದರು.