ಜಿಲ್ಲೆ

ನಿಗಮ ಅಧ್ಯಕ್ಷ ಸ್ಥಾನ ವಜಾಕ್ಕೆ ಆಗ್ರಹ

ಬಳ್ಳಾರಿ : ರಾಜ್ಯ ಪ.ಜಾತಿ ಹಾಗೂ ಪ.ಪಂಗಡದ ಅಲೆಮಾರಿ ಅಭಿವೃದ್ಧಿ ನಿಗಮ ಅಧ್ಯಕ್ಷೆ ಜಿ.ಪಲ್ಲವಿ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಡಿಸಿ ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾದಿಂದ ಮಂಗಳವಾರ ಪ್ರತಿಭಟನೆ ನಡೆಯಿತು.

ಕಳೆದ ವಾರ ಅಲೆಮಾರಿಗಳ ರಾಜ್ಯ ಸಮ್ಮೇಳನದ ಅಂಗವಾಗಿ ನಡೆಯುತ್ತಿರುವ ಪೂರ್ವಭಾವಿ ಸಭೆಗೆ ಮಾಜಿ ಸಚಿವ ಎಚ್.ಆಂಜನೇಯ ಹಾಗೂ 49 ಸಮುದಾಯದ ಮುಖಂಡರನ್ನು ಆಹ್ವಾನಿಸಿತ್ತು. ಆದರೆ, ನಿಗಮದ ಅರ್ಧಕ್ಷೆ ಜಿ.ಪಲ್ಲವಿ ಸಭೆಗೆ ಆಹ್ವಾನ ಇಲ್ಲದೆ ಇದ್ದರೂ ಆಗಮಿಸಿ ಸಭೆಯಲ್ಲಿದ್ದವರನ್ನು ಅವ್ಯಾಚ ಶಬ್ಧಗಳಿಂದ ನಿಂದಿಸಿದ್ದಾರೆ. ಅವರ ವಿರುದ್ಧ ಧ್ವನಿ ಎತ್ತಿದವರನ್ನು ಅಲೆಮಾರಿ ಸಮುದಾಯ ಏಳು ಜನರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದು, ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಸಭೆಯಲ್ಲಿದ್ದ ಎಲ್ಲರನ್ನೂ ಅವಮಾನಿಸಿದ್ದರಿಂದ ಮಾಜಿ ಸಚಿವ ಎಚ್.ಆಂಜನೇಯಲು ಹಾಗೂ 49 ಸಮುದಾಯವರನ್ನು ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ಸರ್ಕಾರ ಕೂಡಲೇ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು. ಬಳಿಕ ಡಿಸಿ ಪ್ರಶಾಂತ ಕುಮಾರ ಮಿಶ್ರಾ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.