ಕೆ.ಶಾಮಸುಂದರ್. 
ಜಿಲ್ಲೆ

ಸಾರ್ವತ್ರಿಕ ರಜೆ ಘೋಷಣೆಗೆ ಒತ್ತಾಯ

ಎ. ಆರ್. ರಘುರಾಮ

ಹಿರೀಸಾವೆ: ಅಯೋಧ್ಯೆಯಲ್ಲಿ ಜ.22 ರಂದು ರಾಮಮಂದಿರ ಪ್ರಾಣ ಪ್ರತಿಷ್ಠಾಪನಾ ಕಾರ್ಯವಿದ್ದು, ಆ ದಿನದಂದು ರಾಜ್ಯ ಸರ್ಕಾರ ಸಾರ್ವತ್ರಿಕ ರಜೆ ಘೋಷಣೆ ಮಾಡಬೇಕು ಎಂದು ವಿಶ್ವ ಹಿಂದು ಪರಿಷತ್ ಜಿಲ್ಲಾ ಮುಖಂಡ ಕೆ.ಶಾಮಸುಂದರ್ ಒತ್ತಾಯಿಸಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಬಹು ಸಂಖ್ಯಾತರ ಆರಾಧ್ಯ ದೈವ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯುವ ದಿನ ರಾಜ್ಯ ಸರ್ಕಾರ ರಜೆ ಘೋಷಣೆ ಮಾಡುವ ಮೂಲಕ ತಾವೂ ಹಿಂದೂಪರ ಇದ್ದೇವೆ ಎನ್ನುವುದನ್ನು ಸಾಬೀತುಪಡಿಸಲಿ ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕ ಸಚಿವರು ಹಾಗೂ ಶಾಸಕರು ಹಿಂದು ಪರವಾಗಿ ಮಾತನಾಡುತ್ತಿದ್ದಾರೆ. ಇವರ ಮಾತು ಸತ್ಯಕ್ಕೆ ಹತ್ತಿರವಾಗಿದ್ದರೆ ಸರ್ಕಾರಿ ರಜೆ ಘೋಷಣೆ ಮಾಡಬೇಕು ಎಂದು ಸವಾಲು ಹಾಕಿದರು.

ದೇಶದ ಒಂಬತ್ತು ರಾಜ್ಯಗಳಲ್ಲಿ ಈಗಾಗಲೇ ಅಲ್ಲಿನ ಸರ್ಕಾರ ಅಧಿಕೃತವಾಗಿ ರಜೆ ಘೋಷಣೆ ಮಾಡಿವೆ. ಇನ್ನು ಕೇಂದ್ರ ಸರ್ಕಾರ ತನ್ನ ಅಧೀನದಲ್ಲಿ ಬರುವ ಸರ್ಕಾರಿ ಇಲಾಖೆಗೆ ರಜೆ ಘೋಷಣೆ ಮಾಡುವ ಮೂಲಕ ಹಿಂದುಗಳ ಪರವಾಗಿ ನಾವಿದ್ದೇವೆ ಎನ್ನುವುದನ್ನು ಸಾಬೀತುಪಡಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಒಂದು ವೇಳೆ ರಾಜ್ಯ ಸರ್ಕಾರ ರಜೆ ಘೋಷಣೆ ಮಾಡದಿದ್ದರೆ ಹಿಂದು ವಿರೋಧಿ ಹಣೆಪಟ್ಟಿ ಕಟ್ಟಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.