ಶೃಂಗೇರಿ ತಾಲೂಕು ಬಿಜೆಪಿ ರೈತ ಮೋರ್ಚಾದಿಂದ ಪ್ರತಿಭಟನೆ ನಡೆಸಲಾಯಿತು. ವಿಜಯ ತಿಪ್ಪರಮಕ್ಕಿ, ರಾಜೇಶ್ ಮೇಗಳಬೈಲು,ನಂದೀಶ್, ಉಮೇಶ್, ವೇಣುಗೋಪಾಲ್ ಇತರರಿದ್ದರು.  
ಜಿಲ್ಲೆ

ಬರಪೀಡಿತ ತಾಲೂಕುಗಳ ಘೋಷಣೆಗೆ ಆಗ್ರಹ

ಎಸ್.ಎನ್.ರವೀಂದ್ರ

ಶೃಂಗೇರಿ: ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸಿದೆ ಎಂದು ಆರೋಪಿಸಿ ಶುಕ್ರವಾರ ತಾಲೂಕು ಬಿಜೆಪಿ ರೈತ ಮೋರ್ಚಾದಿಂದ ತಾಲೂಕು ಕಚೇರಿ ಸಮೀಪ ಪ್ರತಿಭಟನೆ ನಡೆಸಿದರು.

ಜಿಲ್ಲಾ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಟಿ.ಜಿ.ವಿಜಯ ತಿಪ್ಪರಮಕ್ಕಿ ಮಾತನಾಡಿ, ಮಳೆ ಅಭಾವದಿಂದ ರೈತರಿಗೆ ಸಂಕಷ್ಟ ಎದುರಾಗಿದೆ. ವಿದ್ಯುತ್ ಅಭಾವದಿಂದ ರೈತರ ಪಂಪ್‌ಸೆಟ್‌ಗಳಿಗೆ ಅನಿಯಮಿತ ಲೋಡ್ ಶೆಡ್ಡಿಂಗ್ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚಾಗುತ್ತಿದ್ದರೂ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರ ಜಾರಿಗೆ ತಂದ ಕಿಸಾನ್ ಸಮ್ಮಾನ್ ನಿಧಿ, ರೈತರ ವಿದ್ಯಾನಿಧಿ, ಭೂಸಿರಿ, ಶ್ರಮಶಕ್ತಿ, ರೈತ ಸಂಪದ, ಎಪಿಎಂಸಿ ಕಾನೂನು, ಜಿಲ್ಲೆಗೊಂದು ಗೋಶಾಲೆ, ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಮುಂತಾದ ಯೋಜನೆಗಳನ್ನು ಸರ್ಕಾರ ಕೈಬಿಟ್ಟಿದೆ. ರೈತರ ಪರ ಎಂದು ಹೇಳುತ್ತಿದ್ದ ಕಾಂಗ್ರೆಸ್ ಈಗ ಬರಗಾಲ ಎದುರಾದರೂ ಪರಿಹಾರ ನೀಡುತ್ತಿಲ್ಲ. ಹಗಲು ಹೊತ್ತಿನಲ್ಲಿ ಲೋಡ್ ಶೆಡ್ಡಿಂಗ್ ಪರಿಣಾಮ ಬೆಳೆಗಳನ್ನು ಉಳಿಸಲು ಪರದಾಡುವ ಸ್ಥಿತಿ ಕೃಷಿಕರಿಗೆ ಉಂಟಾಗಿದೆ ಎಂದರು. ಮನವಿಪತ್ರವನ್ನು ತಹಸೀಲ್ದಾರ್ ಗೌರಮ್ಮ ಅವರಿಗೆ ಸಲ್ಲಿಸಿದರು.
ತಾಲೂಕು ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ನಂದೀಶ್ ಕುಂಚೇಬೈಲು, ಬಿಜೆಪಿ ಮಂಡಲ ಅಧ್ಯಕ್ಷ ಉಮೇಶ್ ತಲಗಾರು, ಪ್ರಧಾನ ಕಾರ್ಯದರ್ಶಿ ಎಚ್.ಎಸ್.ವೇಣುಗೋಪಾಲ್, ವಿದ್ಯಾರಣ್ಯಪುರ ಗ್ರಾಪಂ ಅಧ್ಯಕ್ಷ ಪ್ರವೀಣ್ ಪೂಜಾರಿ, ತಾಪಂ ಮಾಜಿ ಸದಸ್ಯ ಕಚ್ಚೋಡಿ ರಮೇಶ್, ಮೆಣಸೆ ಗ್ರಾಪಂ ಸದಸ್ಯೆ ಕವಿತಾ ಇದ್ದರು.