ಜಿಲ್ಲೆ

ಪ್ರತಿ ಎಕರೆಗೆ 50 ಸಾವಿರ ರೂ ಪರಿಹಾರ ಘೋಷಿಸಿ: ಮೈಷುಗರ್ ಕಬ್ಬು ಒಪ್ಪಿಗೆದಾರರ ಸಂಘದ ಅಧ್ಯಕ್ಷ ಕೃಷ್ಣ ಒತ್ತಾಯ

ಮಂಡ್ಯ: ಕೆಆರ್‌ಎಸ್ ಅಣೆಕಟ್ಟೆಯಿಂದ ತಮಿಳುನಾಡಿಗೆ ನೀರು ಹರಿಸಿದ ಪರಿಣಾಮ ಜಿಲ್ಲೆಯ ಕಬ್ಬು ಬೆಳೆಗಾರರು ನಷ್ಟ ಅನುಭವಿಸಿದ್ದಾರೆ. ಆದ್ದರಿಂದ ಪ್ರತಿ ಎಕರೆಗೆ ಕನಿಷ್ಟ 50 ಸಾವಿರ ರೂ ಪರಿಹಾರ ಘೋಷಣೆ ಮಾಡಬೇಕೆಂದು ಮೈಷುಗರ್ ಕಬ್ಬು ಒಪ್ಪಿಗೆದಾರರ ಸಂಘದ ಅಧ್ಯಕ್ಷ ಶಂಭೂನಹಳ್ಳಿ ಕೃಷ್ಣ ರಾಜ್ಯಸರ್ಕಾರವನ್ನು ಒತ್ತಾಯಿಸಿದರು.

ನ್ಯಾಯಾಧೀಕರಣದ ಆದೇಶದಂತೆ ತ.ನಾಡಿಗೆ ನೀರು ಬಿಟ್ಟಿರುವುದಾಗಿ ರಾಜ್ಯಸರ್ಕಾರ ಹೇಳಿದೆ. ಆದರೆ ಈ ಬಾರಿ ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ ನೀರಿನ ಕೊರತೆ ಇದ್ದಲ್ಲಿ ಎಷ್ಟು ಪ್ರಮಾಣದ ನೀರನ್ನು ಬಿಡಬೇಕೆಂಬುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ. ಆದ್ದರಿಂದ ರಾಜ್ಯಸರ್ಕಾರ ತ.ನಾಡಿಗೆ ನೀರು ಬಿಡುವ ಬಗ್ಗೆ ಮರುಪರಿಶೀಲನೆ ಮಾಡಬೇಕೆಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಇತ್ತ ತ.ನಾಡಿಗೆ ಕಾವೇರಿ ನೀರು ಬಿಟ್ಟಿರುವ ವಿಚಾರವಾಗಿ ರೈತ ಹಿತರಕ್ಷಣಾ ಸಮಿತಿ ಇದುವರೆಗೂ ಯಾವುದೇ ಸಭೆ ಕರೆಯದೇ ನಿರ್ಲಕ್ಷೃ ವಹಿಸಲಾಗಿದೆ. ಇದು ಜಿಲ್ಲೆಯ ರೈತರಲ್ಲಿ ಆತಂಕ ಸೃಷ್ಟಿಸಿದೆ. ಆದ್ದರಿಂದ ಹೊಸ ಕಾರ್ಯಕಾರಿ ಮಂಡಳಿ ರಚನೆ ಮಾಡುವ ಸಂಬಂಧ ಕೂಡಲೇ ಮುಂದೆ ಬಾರದಿದ್ದರೆ ಸಮಿತಿ ಇಲ್ಲವೆಂದು ತೀರ್ಮಾನಿಸಲಾಗುವುದು. ಜತೆಗೆ ಮತ್ತೊಂದು ಸಮಿತಿ ರಚನೆ ಮಾಡಬೇಕಾಗುತ್ತದೆ ಎಂದು ತಿಳಿಸಿದರು.

ಮೈಷುಗರ್ ಕಾರ್ಖಾನೆಯಲ್ಲಿ ಜು.6ರಂದು ಪ್ರಾರಂಭಿಸಿ ಆ.26ರವರೆಗೆ ಸುಮಾರು 1,08,873 ಟನ್ ಕಬ್ಬು ಅರೆಯಲಾಗಿದೆ. ಅಂತೆಯೇ 1,072 ರೈತರಿಗೆ ಟನ್‌ಗೆ 2,820 ರೂ ಎಫ್‌ಆರ್‌ಪಿ ದರದ ಅನುಗುಣವಾಗಿ 19,58 ಕೋಟಿ ರೂ ಗಳನ್ನು ಸಂದಾಯ ಮಾಡಿರುವುದು ಹರ್ಷದಾಯಕ ವಿಷಯ. ಪ್ರತಿದಿನ 500ಕ್ಕೂ ಹೆಚ್ಚು ಎತ್ತಿನಗಾಡಿಯಲ್ಲಿ ಕಬ್ಬು ಸರಬರಾಜು ಮಾಡಲಾಗುತ್ತಿದೆ. ಈ ಸಾಲಿನಲ್ಲಿ 5 ಲಕ್ಷ ಟನ್ ಕಬ್ಬು ಅರೆಯುವ ಗುರಿ ಹೊಂದಲಾಗಿರುವುದರಿಂದ ಕಾರ್ಖಾನೆ ವ್ಯಾಪ್ತಿಯ ರೈತರು ಮೈಷುಗರ್‌ಗೆ ಕಬ್ಬು ಸರಬರಾಜು ಮಾಡಬೇಕು ಎಂದು ಮನವಿ ಮಾಡಿದ ಅವರು, ಭಾರತದ ಹೆಮ್ಮೆಯ ಇಸ್ರೋ ಸಂಸ್ಥೆಯಿಂದ ನಡೆಸಿದ ಚಂದ್ರಯಾನ-3 ಯಶಸ್ವಿಯಾಗಿದೆ. ಇದಕ್ಕೆ ಸಂಸ್ಥೆಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹಗಲಿರುಳು ಶ್ರಮಿಸಿದ ಎಲ್ಲರಿಗೂ ಕಬ್ಬು ಬೆಳೆಗಾರರ ಪರವಾಗಿ ಧನ್ಯವಾದ ಹೇಳುತ್ತೇನೆ. ಮುಂದಿನ ದಿನದಲ್ಲಿ ಇನ್ನಷ್ಟು ಸಾಧನೆ ಮಾಡುವಂತಾಗಲೀ ಎಂದು ಹಾರೈಸಿದರು.

ಪತ್ರಿಕಾ ಕಾರ್ಯದರ್ಶಿ ಎಂ.ಜೆ.ನಾಗರಾಜು, ನಿರ್ದೇಶಕರಾದ ಬಿ.ಮಾದೇಗೌಡ, ಅಶೋಕ್, ಸಾಮಾಜಿಕ ಹೋರಾಟಗಾರ ತುಳಸೀಧರ್ ಇದ್ದರು.