ತಿ.ನರಸೀಪುರ: ನೆತ್ತಿ ಸುಡುವ ಬಿಸಿಲ ನಡುವೆ ಕಾದಿದ್ದ ನೆಲದ ಮೇಲೆ ಹೆಜ್ಜೆಯನ್ನಿಡುತ್ತಾ ಮಹಿಳೆಯರು ಪಟ್ಟಣದಲ್ಲಿ ಮಂಗಳವಾರ ತಾಯಿ-ಮಗು ಆರೈಕೆ ಮತ್ತು ಹೆರಿಗೆ ಆಸ್ಪತ್ರೆ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ಮತ್ತು ಸಹಿ ಸಂಗ್ರಹ ಆಂದೋಲನ ನಡೆಸಿದರು.
ತಾಲೂಕು ಕೇಂದ್ರದಲ್ಲಿ ತಾಯಿ-ಮಗು ಆರೈಕೆಗೆ ಮತ್ತು ಹೆರಿಗೆಗೆ ಆಸ್ಪತ್ರೆಯೊಂದು ನಿರ್ಮಾಣ ಆಗಲೇಬೇಕೆಂದು ಪಟ್ಟು ಹಿಡಿದಿರುವ ಸಾವಿರಾರು ಮಹಿಳೆಯರು ತಾಯಿ-ಮಗು ಆರೈಕೆ ಮತ್ತು ಹೆರಿಗೆ ಆಸ್ಪತ್ರೆ ನಿರ್ಮಾಣ ಹೋರಾಟ ಸಮಿತಿ ಕರೆಯ ಹಿನ್ನೆಲೆಯಲ್ಲಿ ಸರ್ಕಾರವನ್ನು ಒತ್ತಾಯಿಸಲು ಹಾಗೂ ಈ ಭಾಗದ ಜನಪ್ರತಿನಿಧಿಗಳ ಗಮನವನ್ನು ಸೆಳೆಯಲು ರಸ್ತೆಗೆ ಇಳಿದಿದ್ದರು.
ಹಕ್ಕೊತ್ತಾಯದ ಫಲಕಗಳನ್ನ ಹಿಡಿದು, ಹೆರಿಗೆ ಆಸ್ಪತ್ರೆ ನಿರ್ಮಾಣ ಆಗಬೇಕೆಂಬ ಘೋಷಣೆ ಕೂಗಿ ಗಮನ ಸೆಳೆದರು.
ತಾಲೂಕು ಆಡಳಿತ ಸೌಧದ ಮುಂದೆ ಸೇರಿದ್ದ ಮಹಿಳೆಯರು ಕಾಲೇಜು ರಸ್ತೆ ಮಾರ್ಗವಾಗಿ ಖಾಸಗಿ ಬಸ್ ನಿಲ್ದಾಣ ವೃತ್ತಕ್ಕೆ ತೆರಳಿದರು. ವೃತ್ತದಲ್ಲಿ ಒಂದು ತಾಸಿಗೂ ಹೆಚ್ಚು ಕಾಲ ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆ ನಡೆಸಿದರು. ಬಳಿಕ ಸಾರ್ವಜನಿಕ ಆಸ್ಪತ್ರೆ ರಸ್ತೆಯ ಮೂಲಕ ಕುಟುಂಬ ಮತ್ತು ಕಲ್ಯಾಣ ಇಲಾಖೆಯ ತಾಲೂಕು ಆರೋಗ್ಯಾಧಿಕಾರಿಗಳು ಕಚೇರಿಯಿರುವ ಸಾರ್ವಜನಿಕ ಆಸ್ಪತ್ರೆ ಆವರಣಕ್ಕೆ ತೆರಳಿದರು. ಆಸ್ಪತ್ರೆ ಮುಂಭಾಗ ಕೆಲ ಕಾಲ ಧರಣಿ ಕುಳಿತು ತಹಸೀಲ್ದಾರ್ ಟಿ.ಜಿ. ಸುರೇಶಾಚಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ಕೆ.ರವಿಕುಮಾರ್ ಹಾಗೂ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಎಸ್.ಬಿ.ಅಭಿಲಾಷ್ ಅವರಿಗೆ ಮನವಿ ಸಲ್ಲಿಸಿದರು.
ಆಂದೋಲನದ ನೇತೃತ್ವವನ್ನು ವಹಿಸಿದ್ದ ಹೋರಾಟ ಸಮಿತಿ ಸಂಚಾಲಕ ಆಲಗೂಡು ಶಿವಕುಮಾರ್ ಮಾತನಾಡಿ, ತಾಲೂಕು ಕೇಂದ್ರದಲ್ಲಿ ತಾಯಿ ಮಗು ಆರೈಕೆ ಮತ್ತು ಹೆರಿಗೆ ಆಸ್ಪತ್ರೆ ಇಲ್ಲದೇ ಗ್ರಾಮೀಣ ಜನರು ಪರದಾಡುವಂತಾಗಿದೆ. ನೆರೆಯ ಮಂಡ್ಯ ಹಾಗೂ ಚಾ.ನಗರ ಜಿಲ್ಲೆಯ ಗಡಿ ಗ್ರಾಮಗಳಲ್ಲಿರುವ ಜನರು ಕೂಡ ನರಸೀಪುರ ಸಾರ್ವಜನಿಕ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ. ತುರ್ತು ಹೆರಿಗೆ ವೇಳೆ ಮೈಸೂರಿಗೆ ರೆಫರ್ ಮಾಡಿಬಿಟ್ಟರೆ ಗರ್ಭಿಣಿ ಕುಟುಂಬದವರಲ್ಲಿ ಆತಂಕ ಮಡುಗಟ್ಟಿ ಬಿಡುತ್ತದೆ ಎಂದು ಸಮಸ್ಯೆ ಬಿಚ್ಚಿಟ್ಟರು.
ವರುಣ ಮತ್ತು ನರಸೀಪುರ ಕ್ಷೇತ್ರಗಳನ್ನು ಪ್ರತಿನಿಧಿಸುವ ಸಿಎಂ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಸಮಸ್ಯೆಯ ಗಂಭೀರತೆಯನ್ನು ಅರಿತು ಕೂಡಲೇ ತಾಯಿ ಮಗು ಆರೈಕೆ ಮತ್ತು ಹೆರಿಗೆ ಆಸ್ಪತ್ರೆ ನಿರ್ಮಾಣ ಮಾಡಲು ಪ್ರಸ್ತುತ ಆಯವ್ಯಯದಲ್ಲಿ ಅನುದಾನವನ್ನು ಮಂಜೂರು ಮಾಡುವ ಮೂಲಕ ಮತ್ತೊಂದು ಹೋರಾಟಕ್ಕೆ ಆಸ್ಪದ ನೀಡಬಾರದು ಎಂದು ಮನವಿ ಮಾಡಿದರು.
ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಅಧ್ಯಕ್ಷ ಪಿ.ಎಂ.ಸರೋಜಮ್ಮ ಮಾತನಾಡಿ, ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಮಹದೇವಪ್ಪ ಅವರು ರಾಜ್ಯವನ್ನಾಳುವ ಹುದ್ದೆಯಲ್ಲಿದ್ದಾರೆ. ತಾಲೂಕಿನ ಜನರ ಒತ್ತಾಸೆಯಂತೆ ಪಟ್ಟಣದಲ್ಲಿ ಸುಸಜ್ಜಿತ ಹೆರಿಗೆ ಆಸ್ಪತ್ರೆ ನಿರ್ಮಿಸಲು ಬಜೆಟ್‌ನಲ್ಲಿ ಅನುದಾನ ಘೋಷಣೆ ಮಾಡುವ ಆದೇಶವನ್ನು ಕೂಡಲೇ ನೀಡಬೇಕೆಂದು ಒತ್ತಾಯಿಸಿದರು.
ಪೋಲಿಸ್ ಸಬ್ ಇನ್ಸ್‌ಪೆಕ್ಟರ್ ಜಗದೀಶ ಧೂಳಶೆಟ್ಟಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಪ್ರತಿಭಟನೆಯಲ್ಲಿ ಹೋರಾಟ ಸಮಿತಿ ಅಧ್ಯಕ್ಷೆ ಮೋಹನ ಕುಮಾರಿ, ಕಾರ್ಯದರ್ಶಿಗಳಾದ ರೇಖಾ, ಶಶಿಕಲಾ, ಉಪಾಧ್ಯಕ್ಷೆ ಕೋಮಲಾಕ್ಷಿ, ಸಂಚಾಲಕರಾದ ಸುರೇಶ್, ಸ್ವಾಮಿ, ಕುಕ್ಕೂರು ರಾಜು, ಯಾಚೇನಹಳ್ಳಿ ಸೋಮಶೇಖರ್, ಮಣಿಲಾ, ಸರೋಜಮ್ಮ, ಪ್ರೇಮ ಕುಮಾರಿ, ಮಹದೇವಮ್ಮ, ಕಾಂತಮ್ಮ, ಪಾರ್ವತಿ, ಚಂದ್ರಮ್ಮ, ಹೊನ್ನಮ್ಮ , ಶಾಂತಮ್ಮ, ಡಾ.ಅಂಬೇಡ್ಕರ್ ಅಭಿವೃದ್ಧಿ ಸಂಘದ ಅಧ್ಯಕ್ಷ ಕರೋಹಟ್ಟಿ ಮಹದೇವಯ್ಯ, ರೈತ ಸಂಘದ ತಾಲೂಕು ಅಧ್ಯಕ್ಷ ಕರೋಹಟ್ಟಿ ಕುಮಾರಸ್ವಾಮಿ, ಬೂದಹಳ್ಳಿ ಶಂಕರ್, ದಸಂಸ ಮುಖಂಡರಾದ ಕಿರಗಸೂರು ರಜನಿ, ಶಿವು, ಆಲಗೂಡು ನಾಗರಾಜ್ ಮೂರ್ತಿ, ಶಾಂತಕುಮಾರ್, ಬನ್ನಹಳ್ಳಿಹುಂಡಿ ಉಮೇಶ್, ಬಿಲಿಗೆರೆ ಹುಂಡಿಶಿವಕುಮಾರ್, ಮಾವಿನ ಹಳ್ಳಿ ನಿಂಗರಾಜು, ಕೇತುಪುರ ಶಿವನಂಜು, ಕುಕ್ಕೂರು ಪ್ರಭು, ನಿಲಸೋಗೆ ಪುಟ್ಟ, ಹ್ಯಾಕನೂರು ಶಿವಕುಮಾರ್, ರಾಚಪ್ಪ, ಮಹೇಶ್, ಹೆಮ್ಮಿಗೆ ಚಂದ್ರು ಇತರರಿದ್ದರು