ಜಿಲ್ಲೆ

ಅಂಬೇಡ್ಕರ್ ಭವನ ಪೂರ್ಣಗೊಳಿಸುವಂತೆ ಆಗ್ರಹ

ಅವಿನಾಶ್ ಜೈನಹಳ್ಳಿ

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನ ಕಾಮಗಾರಿ ಆರಂಭವಾಗಿ 13 ವರ್ಷ ಕಳೆದಿದ್ದರೂ ಪೂರ್ಣಗೊಂಡಿಲ್ಲ. ಹಿಂದಿನ ಸರ್ಕಾರಗಳು ಹಣ ಬಿಡುಗಡೆ ಮಾಡದೇ ನಿರ್ಲಕ್ಷ್ಯ ತೋರಿವೆ. ಹೀಗಾಗಿ ನೂತನ ಸಿಎಂ ಸಿದ್ದರಾಮಯ್ಯ ಕೂಡಲೇ ಕಾಮಗಾರಿ ಪ್ರಾರಂಭಿಸುವ ಮೂಲಕ ಬರುವ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ವೇಳೆಗೆ ಲೋಕಾರ್ಪಣೆಗೊಳಿಸುವ ಕೆಲಸ ಮಾಡಬೇಕೆಂದು ದಲಿತ ವೆಲ್ಫೇರ್ ಟ್ರಸ್ಟ್ ಆಗ್ರಹಿಸಿದೆ.

2008ರಲ್ಲಿ ಭವನಕ್ಕೆ ಭೂ ಮಂಜೂರಾತಿ ದೊರೆತು ಕಾಮಗಾರಿ ಪ್ರಾರಂಭವಾಗಿ ಶೇ.90 ರಷ್ಟು ಮುಗಿದಿದ್ದರೂ ನಂತರ ನಿರ್ಲಕ್ಷ್ಯ ತೋರಿದ ಕಾರಣ ಪಾಳು ಭವನದಂತಾಗಿದೆ. ಹೀಗಾಗಿ ನಿಯೋಗವೊಂದು ನೂತನ ಸಿಎಂ ಅವರನ್ನು ಭೇಟಿ ಮಾಡಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದೆ. ಈ ವೇಳೆ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ನ ಅಧ್ಯಕ್ಷ ಶಾಂತರಾಜು ತಿಳಿಸಿದರು.

ಕಾಂಗ್ರೆಸ್ ಪರ ದಲಿತರನ್ನು ಒಗ್ಗೂಡಿಸಿದ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ಈವರೆಗೂ ಸಚಿವರನ್ನಾಗಿಸದಿರುವುದು ಸರಿಯಲ್ಲ. ಇವರು ಈ ಹಿಂದೆ ಲೋಕೋಪಯೋಗಿ ಸಚಿವರಾಗಿದ್ದ ವೇಳೆ ಅನೇಕ ಜನಪರ ಕೆಲಸ ಮಾಡಿದ್ದಾರೆ. ರಸ್ತೆಗಳ ನಿರ್ಮಾಣದ ಮೂಲಕ ಜನತೆಯ ಗಮನ ಸೆಳೆದಿದ್ದಾರೆ. ಹೀಗಾಗಿ ಕೂಡಲೇ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಚಿಕ್ಕಂದಾನಿ, ಸಿದ್ದಸ್ವಾಮಿ, ಜಯಕುಮಾರ್, ಶಿವಪ್ಪ ಹಾಜರಿದ್ದರು.