ಸಿದ್ದಾಪುರ: ಪಟ್ಟಣದ ರಾಜಮಾರ್ಗ ಸೇರಿದಂತೆ ಹಲವು ಮುಖ್ಯರಸ್ತೆಗಳ ಪಕ್ಕದಲ್ಲಿ ಕಳೆದ ಆರೇಳು ವರ್ಷದ ಹಿಂದೆ ಫುಟ್‌ಪಾತ್ ನಿರ್ಮಿಸಿರುವುದು ಗೂಡಂಗಡಿ ಇಡುವುದಕ್ಕಲ್ಲ. ಅಥವಾ ಅಂಗಡಿಕಾರರ ಸಾಮಾನುಗಳನ್ನು ಇಡುವುದಕ್ಕಲ್ಲ. ಅವುಗಳನ್ನು ಖುಲ್ಲಾ ಪಡಿಸುವಂತೆ ಸೂಚನೆ ನೀಡಿದ್ದರೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪಪಂ ಹಿರಿಯ ಸದಸ್ಯ ಕೆ.ಜಿ.ನಾಯ್ಕ ಹಣಜೀಬೈಲ್ ಸೇರಿದಂತೆ ಹಲವು ಸದಸ್ಯರು ಪಪಂ ಅಧಿಕಾರಿಗಳನ್ನು ವಿಚಾರಿಸಿದರು.
ಸ್ಥಳೀಯ ಪಪಂ ಸಭಾಂಗಣದಲ್ಲಿ ಪಪಂ ಅಧ್ಯಕ್ಷೆ ಚಂದ್ರಕಲಾ ಸುರೇಶ ನಾಯ್ಕ ಅಧ್ಯಕ್ಷತೆಯಲ್ಲಿ ಬುಧವಾರ ಕರೆದಿದ್ದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಆರೇಳು ವರ್ಷದ ಹಿಂದೆಯೇ 45ಲಕ್ಷ ರೂ. ಗಳಷ್ಟು ಹಣವನ್ನು ವೆಚ್ಚಮಾಡಿ ಫುಟ್‌ಪಾತ್ ನಿರ್ಮಿಸಲಾಗಿದೆ. ಆದರೆ, ಅಂದಿನಿಂದ ಇಂದಿನವರೆಗೂ ಪಾದಾಚಾರಿಗಳಿಗೆ ಉಪಯೋಗವಾಗುವುದು ಬಿಟ್ಟು ಅಂಗಡಿಕಾರರಿಗೆ ಹೆಚ್ಚು ಉಪಯೋಗವಾಗುತ್ತಿದೆ. ಕೂಡಲೆ ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಪಪಂ ಮುಖ್ಯಾಧಿಕಾರಿ ಜೆ.ಆರ್. ನಾಯ್ಕ ಅವರಿಗೆ ಸೂಚನೆ ನೀಡಿದರು.
ಪಪಂನಲ್ಲಿ ಹೊರಗುತ್ತಿಗೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 10 ಜನರಿಗೆ ಟೆಂಡರ್ ಪಡೆದವರು ಸರಿಯಾಗಿ ವೇತನ ನೀಡುತ್ತಿಲ್ಲ. ಅವರಿಗೆ ಸಮಯಕ್ಕೆ ಸರಿಯಾಗಿ ವೇತನ ನೀಡುವಂತೆ ಟೆಂಡರ್ ಪಡೆದ ಗುತ್ತಿಗೆದಾರರಿಗೆ ಸೂಚಿಸಬೇಕು ಎಂದು ಪಪಂ ಸದಸ್ಯ ಗುರುರಾಜ ಶಾನಭಾಗ ತಿಳಿಸಿದರು.
ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಬೀದಿ ನಾಯಿಗಳ ಕಾಟ ಹೆಚ್ಚುತ್ತಿರುವುದನ್ನು ನಿಯಂತ್ರಿಸುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಕೂಡಲೇ ಆ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಈಗ ಮಂಗಗಳ ಕಾಟ ವಿಪರೀತವಾಗಿದೆ. ಅಲ್ಲದೆ, ವಾಹನ ಸವಾರರಿಗೂ ತೊಂದರೆ ನೀಡುತ್ತಿವೆ. ಈ ಕುರಿತು ಸೂಕ್ತ ಕ್ರಮಕೈಗೊಳ್ಳುವುದಕ್ಕೆ ಸಂಬಂಧಪಟ್ಟ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಪಪಂ ಸದಸ್ಯರು ಆಗ್ರಹಿಸಿದರು.
ಮಳೆಗಾಲ ಬರುತ್ತಿರುವುದರಿಂದ ಎಲ್ಲಿಲ್ಲಿ ಅವಶ್ಯ ಇದೆಯೋ ಅಂತಹ ಸ್ಥಳಗಳಲ್ಲಿ ಗಟಾರದಲ್ಲಿನ ಹೂಳನ್ನು ತೆಗೆಯುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದಕ್ಕೆ ಮುಂದಾಗಬೇಕೆಂದು ಕೆ.ಜಿ.ನಾಯ್ಕ ಹಣಜೀಬೈಲ್ ಸೂಚನೆ ನೀಡಿದರು.
ಉಪಾಧ್ಯಕ್ಷ ವಿನಯ ಹೊನ್ನೆಗುಂಡಿ, ಸ್ಥಾಯಿ ಸಮಿತಿ ಅಧ್ಯಕ್ಷ ವಿಜೇಂದ್ರ ಗೌಡರ್, ರವಿಕುಮಾರ ನಾಯ್ಕ, ಮಾರುತಿ ನಾಯ್ಕ ಹೊಸೂರು, ನಂದನ ಬೋರ್ಕರ್, ವೆಂಕೋಬಾ ಎನ್.ಜಿ, ಮಂಜುಳಾ ನಾಯ್ಕ, ಯಶೋಧಾ, ಮುಬೀನಾ ಗುರುಕಾರ, ರಾಧಿಕಾ ಕಾನಗೋಡ, ಮುಖ್ಯಾಧಿಕಾರಿ ಜೆ.ಆರ್. ನಾಯ್ಕ ಹಾಗೂ ಅಧಿಕಾರಿಗಳಿದ್ದರು.