ಬೇಲೂರು ಪಟ್ಟಣದ ನೆಹರು ವೃತ್ತ ಹಾಗೂ ಬಸವೇಶ್ವರ ವೃತ್ತದಲ್ಲಿ ಗಣಪತಿ ಸೇವಾ ಸಮಿತಿ ಸದಸ್ಯರು ಮತ್ತು ಸಾರ್ವಜನಿಕರು ಪ್ರತಿಭಟನೆ ನಡೆಸಿದರು. 
ಜಿಲ್ಲೆ

ಖಾಸಗಿ ವ್ಯಕ್ತಿ ಜಾಗದ ಖಾತೆ ರದ್ದತಿಗೆ ಆಗ್ರಹ

ಬೇಲೂರು: ಪಟ್ಟಣದ ನೆಹರು ನಗರದಲ್ಲಿರುವ ಕೂಡ್ಲೂರು ನಾಲೆ ಪಕ್ಕದ ಸರ್ಕಾರಿ ಜಾಗವನ್ನು ಖಾಸಗಿ ವ್ಯಕ್ತಿಗೆ ಮಾಡಿರುವ ಖಾತೆ ರದ್ದುಗೊಳಿಸಿ ಗಣಪತಿ ಸೇವಾ ಸಮಿತಿ ಹೇಸರಿಗೆ ಖಾತೆ ಮಾಡುವಂತೆ ಆಗ್ರಹಿಸಿ ಗಣಪತಿ ಸೇವಾ ಸಮಿತಿ ಸದಸ್ಯರು ಮತ್ತು ಸಾರ್ವಜನಿಕರು ನೆಹರು ನಗರದಲ್ಲಿ ರಸ್ತೆ ಸಂಚಾರ ತಡೆ ನಡೆಸಿ, ಬಸವೇಶ್ವರ ವೃತ್ತ ಹಾಗೂ ಪುರಸಭೆ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.

ನೆಹರು ನಗರದಲ್ಲಿರುವ ಕೂಡ್ಲೂರು ನಾಲೆ ಪಕ್ಕದಲ್ಲಿ ಧರಣಿ ಕುಳಿತಿದ್ದ ಪ್ರತಿಭಟನಾಕಾರರು ಪುರಸಭೆ ಕಚೇರಿ ಮುಂದೆ ಪ್ರತಿಭಟನೆಗೆ ಹೊರಡುವ ಮುನ್ನ ನೆಹರು ನಗರದಲ್ಲಿ ಎಲ್ಲ ಅಂಗಡಿ ಮುಂಗಟ್ಟು, ಹೋಟೆಲ್‌ಗಳನ್ನು ಕೆಲ ಗಂಟೆಗಳ ಕಾಲ ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

ಪುರಸಭೆ ಮುಂಭಾಗ ಪ್ರತಿಭಟನೆ ಸಂದರ್ಭ ಅಧ್ಯಕ್ಷ ಎ.ಆರ್.ಅಶೋಕ್ ಹಾಗೂ ಪ್ರತಿಭಟನಾಕಾರರ ನಡುವೆ ಕೆಲ ಸಮಯ ಮಾತಿನ ಚಕಮಕಿ ನಡೆಯಿತು. ಅಧ್ಯಕ್ಷರು ಈಗಲೇ ಜಾಗ ಸರ್ವೆ ಮಾಡಿಸೋಣ ಬನ್ನಿ ಎಂದ ನಂತರ ಪ್ರತಿಭಟನೆ ಕೈಬಿಟ್ಟು ಎಲ್ಲರೂ ಸರ್ವೆಗೆ ತೆರಳಿದರು.

ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಕೆ.ಎಸ್.ಲಿಂಗೇಶ್, ನೆಹರು ನಗರದ ಕೂಡ್ಲೂರು ನಾಲೆ ಪಕ್ಕದಲ್ಲಿ ಕಂದಾಯ ಇಲಾಖೆಗೆ ಸೇರಿದ ಸರ್ಕಾರಿ ಜಾಗ ಇದೆ. ಆದರೆ ಅದು ಯಾರಿಗೂ ಖಾತೆ ಆಗಿರಲಿಲ್ಲ. ಆದರೆ ಈ ಹಿಂದೆ ತಹಸೀಲ್ದಾರ್ ಹೆಸರಿನಲ್ಲಿತ್ತು. ಇದನ್ನು ಗಣಪತಿ ಟ್ರಸ್ಟ್ ಹೆಸರಿಗೆ ಕೊಡಿ ಎಂದು ಹೇಳಿ ಕಳುಹಿಸಿದ್ದೆವು. ಜತೆಗೆ ಈ ಆಸ್ತಿ ಕಬಳಿಕೆ ಆದ ಸಂದರ್ಭ ಕಂದಾಯ ಇಲಾಖೆಯವರು ಏನು ಮಾಡ್ತಿದ್ರು. ಈಗ ಖಾತೆ ಮಾಡಿಸಿಕೊಂಡಿರುವವರು ಸನಾತನಿಗಳು, ಹಿಂದು ಧರ್ಮದವರಾಗಿದ್ದು ದೊಡ್ಡ ಮನಸ್ಸು ಮಾಡಿ ಈ ಜಾಗವನ್ನು ವಾಪಸ್ ಗಣಪತಿ ಸಮಿತಿಗೆ ಕೊಟ್ಟರೆ ಒಳಿತು. ಈ ವರ್ಷವೂ ಅದೇ ಜಾಗದಲ್ಲಿ ಗಣಪತಿ ಇಟ್ಟು ಕೋಮು ಸಾಮರಸ್ಯವನ್ನು ಮೂಡಿಸಬೇಕು. ಇಲ್ಲದಿದ್ದರೆ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡೋಣ ಎಂದರು.

ಗಣಪತಿ ಸೇವಾ ಸಮಿತಿ ಅಧ್ಯಕ್ಷ ಹಾಗೂ ಪುರಸಭೆ ಮಾಜಿ ಉಪಾಧ್ಯಕ್ಷ ಅರುಣ್‌ಕುಮಾರ್ ಮಾತನಾಡಿ, ಕಂದಾಯ ಇಲಾಖೆಯಿಂದ ಪಡೆದ 5 ಗುಂಟೆ ಜಾಗವನ್ನು ಖಾತೆ ಮಾಡಬೇಕಾದ ಪುರಸಭೆ ಅಧಿಕಾರಿಗಳು 2005-06ರಲ್ಲಿ ಮಾಡಿದ ಯಡವಟ್ಟಿನಿಂದ ಅಕ್ರಮವಾಗಿ 12.580 ಅಡಿಯಷ್ಟು ಜಾಗವನ್ನು ಖಾತೆ ಮಾಡಿ ಕೊಟ್ಟಿದ್ದಾರೆ. ನಂತರದಲ್ಲಿ ಸುಭಾಷ್ ಎನ್ನುವವರಿಗೆ ಪೌತಿ ಖಾತೆ ಮಾಡಿ, ನಂತರ ನವೆಂಬರ್ 2024ರಲ್ಲಿ ವಿಭಾಗ ಖಾತೆ ಮಾಡಿದ್ದಾರೆ. ಅಲ್ಲದೆ ವಸತಿ ಗೃಹಕ್ಕೆಂದು ಮಾಡಿ ಪೆಟ್ರೋಲ್ ಬಂಕ್ ಮಾಡಿದ್ದಾರೆ. ಈ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಲಾಗಿದೆ. ನಮಗೆ ಬೇರೇನೂ ಬೇಕಿಲ್ಲ. ಗಣಪತಿ ಸೇವಾ ಸಮಿತಿಗೆ ಈ ಜಾಗ ಖಾತೆ ಆಗಬೇಕು ಅಷ್ಟೆ ಎಂದು ಒತ್ತಾಯಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಯ್ಯದ್ ತೌಫಿಕ್ ಮಾತನಾಡಿ, ಖಾಸಗಿ ವ್ಯಕ್ತಿಗೆ ಎಷ್ಟು ಜಾಗ ಸ್ವಂತದ್ದಿದೆಯೋ ಅದನ್ನು ಬಿಟ್ಟು ಉಳಿಕೆ ಜಾಗವನ್ನು ಗಣಪತಿ ಸಮಿತಿಯವರಿಗೆ ಬಿಟ್ಟು ಕೊಡಬೇಕು. ಇಲ್ಲದಿದ್ದಲ್ಲಿ ಅಹೋರಾತ್ರಿ ಧರಣಿಯನ್ನು ಗಣಪತಿ ಸಮಿತಿಯವರೊಂದಿಗೆ ಮಾಡಬೇಕಾಗುತ್ತದೆ ಎಂದರು.

ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಮಾತನಾಡಿ, ಇದು 1995-96ರಲ್ಲಿ ನಡೆದಿರುವ ಘಟನೆ. ಇತ್ತೀಚೆಗೆ ನಡೆದಿದ್ದರೆ ನಾನು ಜವಾಬ್ದಾರಿ ಹೊರುತ್ತಿದ್ದೆ. ಅಂದಿನಿಂದ ಇಂದಿನವರೆಗೂ ಯಾವ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬುದನ್ನು ಪರಿಶೀಲಿಸಿ ಅವರಿಗೆ ಪತ್ರ ಬರೆದು ಕರೆಸಿ ವಿಚಾರಿಸಬೇಕಿದೆ. ಇದಾದ ನಂತರ ದಾಖಲಾತಿಯೊಂದಿಗೆ ತಹಸೀಲ್ದಾರರನ್ನು ಕರೆಸಿ, ನಮ್ಮ ಸಿಬ್ಬಂದಿಯೊಂದಿಗೆ ಗಣಪತಿ ಸಮಿತಿ ಪದಾಧಿಕಾರಿಗಳ ಸಮ್ಮುಖದಲ್ಲಿ ಸರ್ವೇ ಮಾಡಿಸಲಾಗುವುದು. ಇಲ್ಲಿವರೆಗೂ ಕಚೇರಿಯಲ್ಲಿ ನಡೆದಿರುವ ಘಟನೆಗಳು ನನ್ನ ಗಮನಕ್ಕೆ ಬಂದಿಲ್ಲ. ಕಾನೂನು ತೊಡಕು ಬಂದರೆ ಅಲ್ಲಿಯೇ ಗಣಪತಿ ಪ್ರತಿಷ್ಠಾಪಿಸಲು ಮಾಲೀಕರನ್ನು ಕರೆಸಿ ಮಾತನಾಡೋಣ ಎಂದರು

.ಪ್ರತಿಭಟನೆಯಲ್ಲಿ ತಾಪಂ ಮಾಜಿ ಅಧ್ಯಕ್ಷ ಪರ್ವತಯ್ಯ, ಪುರಸಭೆ ಸದಸ್ಯರಾದ ಶಾಂತಕುಮಾರ್, ಪ್ರಭಾಕರ್, ಜಗದೀಶ್, ಮಾಜಿ ಸದಸ್ಯ ಮಂಜುನಾಥ್, ಉದ್ಯಮಿ ರಾಜಶೇಖರ್, ಮುಖಂಡರಾದ ಅರುಣ್ ಕುಮಾರ್, ಮಸಾಲೆ ಮಂಜು, ಫಿಶ್ ತೌಫಿಕ್, ತೋಟೇಶ್, ವೆಂಕಟೇಶ್, ಅಬ್ರಾರ್ ಸೇರಿದಂತೆ ಇತರರಿದ್ದರು.