ಗಂಗಾವತಿ: ತಾಲೂಕಿನ ಬಸಾಪಟ್ಟಣ ಬಸ್ ನಿಲ್ದಾಣಕ್ಕೆ ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ರಾಷ್ಟ್ರ ಸಮಿತಿ ತಾಲೂಕು ಕಾರ್ಯಕರ್ತರು ಕೆಕೆಆರ್‌ಟಿಸಿ ಘಟಕ ವ್ಯವಸ್ಥಾಪಕ ರಾಜಶೇಖರ್‌ಗೆ ಶುಕ್ರವಾರ ಮನವಿ ಸಲ್ಲಿಸಿದರು.
ಪಕ್ಷದ ಯುವ ಘಟಕದ ಅಧ್ಯಕ್ಷ ಕೆ.ನಿರುಪಾದಿ ಗೋಮರ್ಸಿ ಮಾತನಾಡಿ, ಬಸಾಪಟ್ಟಣದಲ್ಲಿ ಹಲವು ವರ್ಷಗಳ ಹಿಂದೆ ನಿರ್ಮಿಸಿದ ಬಸ್ ನಿಲ್ದಾಣ ನಿರ್ವಹಣೆ ಕೊರತೆಯಿಂದ ಹಾಳಾಗುತ್ತಿದೆ. 90 ಲಕ್ಷ ರೂ. ಖರ್ಚು ಮಾಡಿದರೂ ನಿಲ್ದಾಣದೊಳಗೆ ಬಸ್‌ಗಳ ನಿಲುಗಡೆಯಾಗುತ್ತಿಲ್ಲ. ಬಸಾಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮದ ವಿದ್ಯಾರ್ಥಿಗಳು ನಗರ ಪ್ರದೇಶಕ್ಕೆ ವಿದ್ಯಾಭ್ಯಾಸಕ್ಕೆ ಹೋಗುತ್ತಿದ್ದು, ಬಸ್ ಸಂಚಾರದ ಕೊರತೆಯಿಂದ ನಿತ್ಯವೂ ಸಂಕಷ್ಟಕ್ಕೊಳಗಾಗುತ್ತಿದ್ದಾರೆ. ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕೂಡಲೇ ನಿಲ್ದಾಣದಲ್ಲಿ ಬಸ್ ನಿಲುಗಡೆಗೆ ಕ್ರಮವಹಿಸಬೇಕು. ಇಲ್ಲದಿದ್ದರೆ ಸಂಚಾರ ಸ್ಥಗಿತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ರೈತ ಘಟಕದ ಜಿಲ್ಲಾಧ್ಯಕ್ಷ ಕನಕಪ್ಪ ಹುಡೇಜಾಲಿ, ಸಂ.ಕಾರ್ಯದರ್ಶಿ ಗಣೇಶ್, ಜಿಲ್ಲಾ ಮತ್ತು ತಾಲೂಕು ಸಮಿತಿ ಸದಸ್ಯರಿದ್ದರು.