ಸರಗೂರು ತಾಲೂಕಿನ ಹುಸ್ಕೂರು ಹಾಡಿಗೆ ಸಾರಿಗೆ ಬಸ್ ಕಲ್ಪಿಸುವಂತೆ ಆಗ್ರಹಿಸಿ ಅಖಿಲ ಭಾರತ ಜನಾಧಿಕಾರ ಸುರಕ್ಷಾ ಸಮಿತಿ ನೇತೃತ್ವದಲ್ಲಿ ಹಾಡಿಯ ಜನರು ಪ್ರತಿಭಟನೆ ನಡೆಸಿದರು. ಸುನಿಲ್ ಟಿ.ಆರ್., ಬೈರ, ಬುಂಡಮ್ಮ, ರತ್ನಮ್ಮ, ನೂರಾಳಯ್ಯ, ಕುಳ್ಳಯ್ಯ ಇತರರು ಇದ್ದರು. 
ಜಿಲ್ಲೆ

ಹುಸ್ಕೂರು ಹಾಡಿಗೆ ಬಸ್ ಸೌಲಭ್ಯ ಕಲ್ಪಿಸಲು ಆಗ್ರಹ

ರವಿಕುಮಾರ್ ಪಿ. ಕೆ

ಸರಗೂರು: ತಾಲೂಕಿನ ಹುಸ್ಕೂರು ಹಾಡಿಗೆ ಬಸ್ ಸಂಪರ್ಕ ಕಲ್ಪಿಸಲು ಆಗ್ರಹಿಸಿ ಅಖಿಲ ಭಾರತ ಜನಾಧಿಕಾರ ಸುರಕ್ಷಾ ಸಮಿತಿಯ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಸಮಿತಿಯ ಸಂಚಾಲಕ ಟಿ.ಆರ್.ಸುನಿಲ್ ಮಾತನಾಡಿ, ಅರಣ್ಯದೊಳಗೆ ಇರುವ ಹಾಡಿಗೆ ಸರಗೂರಿನಿಂದ ಬಸ್ ವ್ಯವಸ್ಥೆ ಮಾಡಬೇಕು. ಈಗಾಗಲೇ ದಡದಹಳ್ಳಿ ಮಾರ್ಗವಾಗಿ ಹೋಗುವ ಬಸ್ ಇಲ್ಲಿಗೆ ಬಂದು ಹೋಗುವಂತೆ ಮಾಡಬೇಕು. ಕೂಡಲೇ ಸಮಸ್ಯೆಯನ್ನು ಬಗೆಹರಿಸದಿದ್ದರೆ, ಮುಂದಿನ ಹಂತದಲ್ಲಿ ಹುಸ್ಕೂರು ಹಾಡಿ ಜನರು ಅನಿರ್ದಿಷ್ಟಾವಧಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಹಾಡಿಯ ಮುಖಂಡ ಬೈರ ಮಾತನಾಡಿ, ಸರಗೂರಿನ ಶಾಲೆಗೆ 18 ಮಕ್ಕಳು ಪ್ರತಿದಿನ 12 ಕಿ.ಮೀ.ಗೆ 30 ರೂ. ಕೊಟ್ಟು ಆಟೋಗಳಲ್ಲಿ ಹೋಗಬೇಕಿದೆ. ಪ್ರತಿದಿನ ಕೂಲಿ ಮಾಡಿದರೆ ಮಾತ್ರ ಅವರ ಜೀವನ ನಡೆಸಲು ಸಾಧ್ಯವಾಗುವಂತಹ ಪರಿಸ್ಥಿತಿ ಇರುವ ಬಡ ಆದಿವಾಸಿ ಜನರಿಗೆ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವುದೇ ಹೆಚ್ಚು ಎನ್ನುವ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ವರ್ಷಕ್ಕೆ ಸಾವಿರಾರು ಹಣ ಖರ್ಚು ಮಾಡಿ ಶಾಲೆಗೆ ಕಳಿಸುವುದು ಬಹಳ ಕಷ್ಟ. ಇನ್ನುಳಿದ 20 ಮಕ್ಕಳು ಹಾಡಿಯಿಂದ ಅರಣ್ಯದ ಅಂಚಿನಲ್ಲಿ ನಾಲ್ಕು ಕಿ.ಮೀ. ದಡದಹಳ್ಳಿ ಶಾಲೆಗೆ ನಡೆದುಕೊಂಡೇ ಹೋಗಬೇಕು. ಹಾಗಾಗಿ ಪ್ರತಿ ವರ್ಷ 20 ಮಕ್ಕಳು 5ನೇ ತರಗತಿಯ ನಂತರ ವಿದ್ಯಾಭ್ಯಾಸದಿಂದ ವಂಚಿತರಾಗುವಂತಾಗಿದೆ. ಹುಸ್ಕೂರು ಹಾಡಿಯಲ್ಲಿ 5ನೇ ತರಗತಿಯವರೆಗೆ ಮಾತ್ರ ಇದೆ. ಅಲ್ಲಿವರೆಗೆ ಮಾತ್ರ ಮಕ್ಕಳನ್ನು ಓದಿಸಲು ಸಾಧ್ಯವಾಗುತ್ತಿದೆ. ಈ ಶಾಲೆಗೆ ಬರುವ ಶಿಕ್ಷಕರು ಓಡಾಡಲು ಸಹ ಸಮಸ್ಯೆ ಆಗುತ್ತಿದೆ ಎಂದು ದೂರಿದರು.

ಹಾಡಿಯ ಮುಖಂಡರಾದ ಬುಂಡಮ್ಮ ಮಾತನಾಡಿ, ರಸ್ತೆ ನಿರ್ಮಾಣ ಮಾಡುವುದಾಗಿ ಹೇಳಿ ವರ್ಷಗಳೇ ಕಳೆದರೂ ಇದುವರೆಗೂ ಕೆಲಸ ಪ್ರಾರಂಭ ಮಾಡಿಲ್ಲ. ಇದನ್ನೇ ನೆಪ ಮಾಡಿಕೊಂಡು ಸಾರಿಗೆ ಅಧಿಕಾರಿಗಳು ಬಸ್ ಹಾಕಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ರಾಜಕೀಯ ಪಕ್ಷಗಳ ಕಾರ್ಯಕ್ರಮಗಳಿಗೆ ಜನರನ್ನು ಕರೆದುಕೊಂಡು ಹೋಗಲು ಸಾರಿಗೆ ಬಸ್‌ಗಳು ಇದೇ ರಸ್ತೆಯಲ್ಲಿ ಬಂದು ನಿಲ್ಲುತ್ತದೆ. ಅದಲ್ಲದೆ ಶಾಲೆ, ಅಂಗನವಾಡಿಗೆ ಬರುವ ಅಕ್ಕಿ ಸಾಗಿಸುವ ದೊಡ್ಡ ದೊಡ್ಡ ಲಾರಿಗಳೇ ಈ ರಸ್ತೆಯಲ್ಲಿ ಬಂದು ಹೋಗುತ್ತವೆ. ಆದರೂ ಹೆಗ್ಗಡದೇವನಕೋಟೆ ಡಿಪೋ ಅಧಿಕಾರಿಗಳು ರಸ್ತೆ ನೆಪ ಹೇಳುತ್ತಾ ಬಸ್ ಬಿಡದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.

ಹುಸ್ಕೂರು ಹಾಡಿಯ ಮುಖಂಡರಾದ ರತ್ನಮ್ಮ, ನೂರಾಳಯ್ಯ, ಕುಳ್ಳಯ್ಯ, ನಿಂಗಯ್ಯ, ಚಾಮ,ಮಹೇಶ್, ಅಪ್ಪು, ನಿಂಗಯ್ಯ, ಸೋಮ, ವಿದ್ಯಾರ್ಥಿಗಳು ಭಾಗವಹಿಸಿದ್ದರು.