ಜಿಲ್ಲೆ

ತಾಯಿ ಕಾರ್ಡ್ ಭರ್ತಿ ಮಾಡಿಕೊಡಲು ಲಂಚಕ್ಕೆ ಬೇಡಿಕೆ

ಕೊಳ್ಳೇಗಾಲ: ತಾಲೂಕಿನ ಆಲಹಳ್ಳಿ ಗ್ರಾಮದಲ್ಲಿ ತಾಯಿ ಕಾರ್ಡ್ ಭರ್ತಿ ಮಾಡಿ ನೀಡಲು ಮಹಿಳೆಯೊಬ್ಬರಿಗೆ ಉಪ ಆರೋಗ್ಯ ಕೇಂದ್ರದ ಸುರಕ್ಷತಾ ಅಧಿಕಾರಿ ಹಣದ ಬೇಡಿಕೆ ಇಟ್ಟರೆನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿರುವ ಆರೋಗ್ಯ ಸಿಬ್ಬಂದಿ ಆಲಹಳ್ಳಿ ಗ್ರಾಮದ ಆರೋಗ್ಯ ಉಪ ಕೇಂದ್ರದ ಸುರಕ್ಷತಾ ಅಧಿಕಾರಿ ಎಂದು ಗುರುತಿಸಲಾಗಿದೆ. ಇವರು ಆಲಹಳ್ಳಿ ಗ್ರಾಮದ ಲಕ್ಷ್ಮೀ ಅವರ ಜತೆ ಸಂಭಾಷಣೆ ಮಾಡಿರುವ ದೃಶ್ಯಾವಳಿ ಸೆರೆಯಾಗಿದೆ.

ಈ ಬಗ್ಗೆ ಚಿಲಕವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯೆದ್ಯ ಸುಗೋಶ್ ಗಂಜಮ್ ವಿಜಯವಾಣಿಯೊಂದಿಗೆ ಮಾತನಾಡಿ, ವೈರಲ್ ಆಗಿರುವ ವಿಡೀಯೋಗೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿಗೆ ವರದಿ ನೀಡುವಂತೆ ಕೇಳಲಾಗಿದೆ ಎಂದರು.

ಚಾಮರಾಜನಗರ ಡಿಎಚ್‌ಒ ಚಿದಂಬರಂ ಮಾತನಾಡಿ, ಆರೋಗ್ಯ ಸಿಬ್ಬಂದಿ ಲಂಚಕ್ಕೆ ಬೇಡಿಕೆ ಇಡುತ್ತಿರುವ ವಿಡಿಯೋವನ್ನು ನಾನು ವೀಕ್ಷಿಸಿಲ್ಲ. ಆದರೆ ಶುಕ್ರವಾರ ಚಿಲಕವಾಡಿ ಆಸ್ಪತ್ರೆಯ ವ್ಯೆದ್ಯರು ನನಗೆ ಮಾಹಿತಿ ನೀಡಿದ್ದಾರೆ. 4-5 ತಿಂಗಳ ಹಿಂದೆ ತಾಯಿ ಕಾರ್ಡ್ ನೀಡಲು ಆರೋಗ್ಯ ಸಿಬ್ಬಂದಿ ಲಂಚ ಪಡೆದಿರುವ ವಿಡಿಯೋ ಮಾಡಲಾಗಿತ್ತು. ಆಗ ಸಿಬ್ಬಂದಿಗೆ ನಾನು ಎಚ್ಚರಿಕೆ ನೀಡಿದ್ದೆ. ನಂತರ ಇಂತಹ ಘಟನೆ ನಡೆದಿಲ್ಲ ಎಂದು ವ್ಯೆದ್ಯರು ತಿಳಿಸಿದರು. ವಿಚಾರ ಬಗ್ಗೆ ಏಕೆ ನಮಗೆ ಮಾಹಿತಿ ನೀಡಿಲ್ಲ. ಕೂಡಲೇ ಪ್ರಕರಣ ವರದಿ ನೀಡುವಂತೆ ತಿಳಿಸಿದ್ದೇನೆ ಎಂದರು.

ವಿಡಿಯೋದಲ್ಲಿ ಏನಿದೆ?: ತಾಯಿ ಕಾರ್ಡ್ ಭರ್ತಿ ನೀಡಬೇಕಾದರೆ 500 ರೂ. ಕೊಡಬೇಕು ಎಂದು ಆರೋಗ್ಯ ಸಿಬ್ಬಂದಿ ಲಕ್ಷ್ಮೀ ಎಂಬ ಮಹಿಳೆಯನ್ನು ಲಂಚಕ್ಕೆ ಪೀಡಿಸುತ್ತಿರುವುದನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಗೌಪ್ಯವಾಗಿ ಚಿತ್ರೀಕರಿಸಿದ್ದಾರೆ. ನರ್ಸ್ 500 ರೂ. ನೀಡಬೇಕೆಂದು ಪೀಡಿಸಿದ್ದಾರೆ. ಬಳಿಕ ಮಹಿಳೆ 300 ರೂ. ನೀಡಿದ್ದಾರೆ. ಇದಕ್ಕೊಪ್ಪದ ಆರೋಗ್ಯ ಸಿಬ್ಬಂದಿ ಹಣವನ್ನು ಹಿಂದಿರುಗಿಸಿ ನಿಮ್ಮ ಹಣ ಬೇಡವೇ ಬೇಡ, ನನಗೇನು ಬೇಸರವಿಲ್ಲ. ತಾಯಿ ಕಾರ್ಡ್ ಇಲ್ಲಿಯೇ ನನ್ನ ಬಳಿಯೇ ಇದೆ. ಇಗಲೇ ಬರೆದು ಕೊಡುತ್ತೇನೆ. ನೀವೇ ಮುಂದೆ ಎಂಟ್ರಿ ಮಾಡಿಸಿಕೊಳ್ಳಿ. ಮೊದಲೆಲ್ಲ ನಮಗೆ ಟ್ಯಾಬ್ ನೀಡುತ್ತಿದ್ದರೂ, ಇಂಟರ್‌ನೆಟ್ ಹಾಕಿಸಿಕೊಡುತ್ತಿದ್ದರೂ ನಾವೇ ಎಂಟ್ರಿ ಮಾಡಿ ಕೊಡುತ್ತಿದ್ದೆವು. ಆದರೀಗ ಆ ಪರಿಸ್ಥಿತಿಯಿಲ್ಲ. ನಾವೇ ಆನ್‌ಲೈನ್ ಸೆಂಟರ್‌ಗೆ ತೆರಳಿ ಹೋಗಿ ಮಾಹಿತಿ ನೋಂದಾಯಿಸಬೇಕು. 2 ಗಂಟೆ ಸಮಯ ಹಿಡಿಯುತ್ತದೆ. ಕಾರ್ಡ್ ಕೊಡದಿದ್ದರೆ ನಮ್ಮದು ತಪ್ಪಾಗುತ್ತದೆ. ಬೇಕಿದ್ದರೆ ನಾನು ಕಾರ್ಡ್ ನೀಡುತ್ತೇನೆ. ನೀವೇ ಹೋಗಿ ಎಂಟ್ರಿ ಮಾಡಿಸಿಕೊಳ್ಳಿ ಎಂದಿದ್ದಾರೆ.

ಈ ವೇಳೆ ಲಕ್ಷ್ಮಿ ತಾಯಿ ಹಾಗಾದರೆ ನಾವು ನಿಮ್ಮನ್ನು ಇಷ್ಟು ದಿನ ಏಕೆ ಕಾಯಬೇಕಿತ್ತು. ನಿಮಗೆ ಸಂಬಳ ಕೊಡುತ್ತಾರೆ ತಾನೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಿಬ್ಬಂದಿ ಕಾರ್ಡ್ ಕೊಡುತ್ತೇನೆ ಎಂಟ್ರಿ ಮಾಡಿಕೊಡಿಸಿಕೊಳ್ಳಿ ಎಂದು ತಿಳಿಸಿದ್ದಲ್ಲದೆ, ನಾನೇಕೆ 500 ರೂ. ಕೇಳುತ್ತೇನೆ ಎಂದರೆ ನನ್ನ ಕೆಲಸ ಇವತ್ತಿಗೆ ಮುಗಿಯುವುದಿಲ್ಲ. ಡೆಲಿವರಿ ಆದ ಮೇಲೆ ಮಗುವಿಗೆ ಇಂಜೆಕ್ಷನ್ ಸಮಯ ನಿಗದಿಪಡಿಸಬೇಕು. ಮುಂದಿನ ಆಗು-ಹೋಗುಗಳನ್ನು ಆನ್‌ಲೈನ್‌ನಲ್ಲಿ ಎಂಟ್ರಿ ಮಾಡಬೇಕು. ನಾನೇ ಸರ್ವಿಸ್ ಕೊಡಬೇಕು. ನಾನೇ ಜವಾಬ್ದಾರಿ ಆಗಿರುತ್ತೇನೆ. ಬೇಕಿದ್ದರೆ ಬೇರೆಯರನ್ನಾದರೂ ಕೇಳಿ. ನಾನು ಎಲ್ಲೂ ಕಡಿಮೆ ತೆಗೆದುಕೊಂಡಿಲ್ಲ ಎಂದಿದ್ದು, ಕೊನೆಗೆ ಮಹಿಳೆ 300 ರೂ. ಪಡೆದುಕೊಳ್ಳುವಂತೆ ಮನವಿ ಮಾಡಿ ಆರೋಗ್ಯ ಸಿಬ್ಬಂದಿ ಕೈಗೆ ನೀಡಿರುವ ದೃಶ್ಯಾವಳಿ ವಿಡಿಯೋದಲ್ಲಿ ಸೆರೆಯಾಗಿದೆ.