ಕಂಪ್ಲಿ: ದೀಪಾವಳಿ ನಿಮಿತ್ತ ಪಟ್ಟಣದ ಮಾರುಕಟ್ಟೆಯಲ್ಲಿ ಪೂಜಾ ಸಾಮಗ್ರಿ ಮಾರಾಟ ಜೋರಾಗಿತ್ತು.
ಅಂಗಡಿ ಮುಂಗಟ್ಟುಗಳನ್ನು ಸಿಂಗರಿಸಲು ದೊಡ್ಡ, ಚಿಕ್ಕ ಬಾಳೆಗೊನೆ, ಕುಂಬಳಕಾಯಿ, ಕಬ್ಬು, ಚೆಂಡು ಹೂ, ತಳಿರು ತೋರಣ, ದೀಪ ಬೆಳಗಿಸಲು ಮಣ್ಣಿನ ಪಣತಿ, ಎಲೆ, ಬಾಳೆಹಣ್ಣು, ತೆಂಗಿನಕಾಯಿ, ನಾನಾ ಹೂವಿನ ಸರ, ಹಣ್ಣುಗಳ ಮಾರಾಟ ಜೋರಾಗಿತ್ತು.
ಲಕ್ಷ್ಮೀ ಸರಸ್ವತಿಯ ಮಂಟಪವನ್ನು ಶೃಂಗರಿಸಲು ವಿದ್ಯುತ್ ದೀಪಗಳ ಸರಮಾಲೆ, ಕಾಗದ, ಪ್ಲಾಸ್ಟಿಕ್ ಹೂಗಳ ಮಾಲೆ, ಮಿಂಚುಪಟ್ಟಿಗಳ ಸರ, ಆಕಾಶಬುಟ್ಟಿಗಳ ಮಾರಾಟ ಹಾಗೂ ತಳ್ಳು ಬಂಡಿಗಳಲ್ಲಿಯೂ ಹೂ, ಹಣ್ಣು ವ್ಯಾಪಾರ ಚುರುಕಾಗಿತ್ತು. ಪಟ್ಟಣದ ವಾಲ್ಮೀಕಿ ವೃತ್ತದ ಬಳಿಯ ತೆರೆದ ಮೈದಾನದಲ್ಲಿ ಆರಂಭಿಸಿರುವ ನಾಲ್ಕು ಪಟಾಕಿ ಅಂಗಡಿಗಳಲ್ಲಿ ಜನಜಂಗುಳಿ ಹೆಚ್ಚಿತ್ತು.