ಜಿಲ್ಲೆ

ಬೇರೆ ಶಿಕ್ಷಕರ ನಿಯೋಜನೆಗೆ ಒತ್ತಾಯ

ಬಸವರಾಜ ವೀರಪ್ಪ ಗರಗ

ಯಲ್ಲಾಪುರ: ತಾಲೂಕಿನ ಗೇರಾಳ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ಬದಲಿಸಿ, ಬೇರೆ ಶಿಕ್ಷಕರನ್ನು ನಿಯೋಜಿಸಬೇಕು ಎಂದು ಗ್ರಾಮಸ್ಥರು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್. ಹೆಗಡೆ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಗೇರಾಳ ಏಕೋಪಾಧ್ಯಾಯ ಶಾಲೆಯಾಗಿದ್ದು, ಇಲ್ಲಿ ಕಳೆದ ಎಂಟು ವರ್ಷಗಳಿಂದ ವೀಣಾ ಮಂಜುನಾಥ ಹೆಗಡೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ವಿದ್ಯಾರ್ಥಿಗಳು, ಸಾರ್ವಜನಿಕರೊಂದಿಗೆ ಹೇಗಿರಬೇಕು ಎಂದು ತಿಳಿದಿಲ್ಲ. ಇದರಿಂದ ಶಿಕ್ಷಣದ ಪ್ರಗತಿ ಮಂದಗತಿಯಲ್ಲಿ ಸಾಗುತ್ತಿದೆ. ನೊಂದ ಪಾಲಕರು ಈ ಹಿಂದೆ ಬಿಇಒ, ಡಿಡಿಪಿಐ, ಧಾರವಾಡ ಆಯುಕ್ತರಿಗೂ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ಇಲಾಖೆಯಿಂದ ಯಾವುದೇ ಕ್ರಮ ಕೈಗೊಂಡಿಲ್ಲ.

ಈಗ ಪುನಃ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದ್ದು, ಮತ್ತೆ ಅವರಿಂದ ಹಳೆಯ ಸಮಸ್ಯೆಗಳು ಪುನರಾವರ್ತನೆ ಆಗಲಿದೆ. ಶಾಲೆಗೆ ಶಿಕ್ಷಕರನ್ನು ಬದಲಿಸಿ, ಬೇರೆ ಶಿಕ್ಷಕರನ್ನು ಕೊಡದೆ ಇದ್ದಲ್ಲಿ ಶಾಲೆಗೆ ಬೀಗ ಹಾಕಿ, ವಿದ್ಯಾರ್ಥಿಗಳು, ಪಾಲಕರು, ಗ್ರಾಮಸ್ಥರು ಸೇರಿ ಶಾಲೆಯ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗೇರಾಳ ಎಸ್​ಡಿಎಂಸಿ ಅಧ್ಯಕ್ಷ ಶ್ರೀಪತಿ ಭಟ್ಟ, ಗ್ರಾಮಸ್ಥರಾದ ಗಣಪತಿ ನಾಯ್ಕ, ಶಂಕರ ಧೂಳಿ, ದಾಮೋದರ ಹೆಗಡೆ, ಜಿ.ಎಸ್. ಭಟ್ಟ ಕಾರೆಮನೆ, ಮಹಾಬಲೇಶ್ವರ ಭಟ್ಟ, ಶಾಂತಿ ನಾಯ್ಕ, ದತ್ತಾತ್ರೇಯ ಭಟ್ಟ, ಮಂಜುನಾಥ ಹೆಗಡೆ, ಗಂಗಾ ಭಟ್ಟ, ರೂಪಾ ಭಟ್ಟ, ಸುವರ್ಣಾ ನಾಯ್ಕ, ಸುಮಂಗಲಾ ಧೂಳಿ, ಇತರರಿದ್ದರು.