ಜಿಲ್ಲೆ

ಸೇವಾ ಹಿರಿತನದ ಮೇಲೆ ನೇಮಕಕ್ಕೆ ಆಗ್ರಹಿಸಿ ಪ್ರತಿಭಟನೆ

ಆರ್.ಕೃಷ್ಣ

ಮೈಸೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಿಡಿಸಿ ಹೆಸರಿನಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಸೇವಾ ಹಿರಿತನದ ಮೇಲೆ ಹೊರಗುತ್ತಿಗೆ ಮೂಲಕ ನೇಮಕ ಮಾಡಿಕೊಂಡು, ಕೆಲಸ ಮಾಡದೆ ಇರುವ ಹೊರಗಿನ ವ್ಯಕ್ತಿಗಳ ನೇಮಕ ತಿರಸ್ಕರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಇಲಾಖೆ ಕಾಲೇಜುಗಳ ಕಾರ್ಮಿಕರ ಸಂಘದಿಂದ ಪ್ರತಿಭಟನೆ ನಡೆಯಿತು.

ಹುಣಸೂರು ರಸ್ತೆಯಲ್ಲಿರುವ ಕಾಲೇಜು ಶಿಕ್ಷಣ ಇಲಾಖೆ ಕಚೇರಿ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದ ನೌಕರರು, ಸರ್ಕಾರ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಹೊರಗುತ್ತಿಗೆ ಮೂಲಕ ನೇಮಕ ಮಾಡಿಕೊಳ್ಳಲು ಜಮೀನಿ ಸೆಕ್ಯೂರಿಟಿ ಸರ್ವಿಸಸ್‌ಗೆ ಗುತ್ತಿಗೆ ನೀಡಿದೆ. ಗುತ್ತಿಗೆದಾರರು ರಾಜ್ಯದ ಎಲ್ಲ ಪ್ರಾಂಶುಪಾಲರಿಗೆ ಇ-ಮೇಲ್ ಮೂಲಕ ಕಾಲೇಜಿಗೆ ಮಂಜೂರಾಗಿರುವ ಹುದ್ದೆಗಳ ಸಂಖ್ಯೆಗಳ ವಿವರದೊಂದಿಗೆ ಪತ್ರ ಕಳುಹಿಸಿ, ಕಾಲೇಜುಗಳಲ್ಲಿ ಈಗಾಗಲೇ ಕೆಲಸ ಮಾಡುತ್ತಿರುವ ಎಸ್‌ಎಸ್‌ಎಲ್‌ಸಿ ಪಾಸ್ ಆಗಿರುವ ಸಿಡಿಸಿ ಕಾರ್ಮಿಕರ ಪಟ್ಟಿ ನೀಡುವಂತೆ ಕೇಳಿದೆ ಎಂದರು.

ಪ್ರಾಂಶುಪಾಲರು ಗುತ್ತಿಗೆದಾರನ ಇಚ್ಛಾನುಸಾರ ನೇಮಕ ಮಾಡಲು ಅನುಮತಿ ನೀಡಿದ್ದಾರೆ. ಇದರ ಲಾಭ ಪಡೆದು ಗುತ್ತಿಗೆದಾರರು ಎಸ್‌ಎಸ್‌ಎಲ್‌ಸಿ ಪಾಸಾದ ಕಾರ್ಮಿಕರು ಲಭ್ಯವಿಲ್ಲದ ಕಾಲೇಜುಗಳಿಗೆ ಹೊರಗಿನ ವ್ಯಕ್ತಿಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದಾರೆ. ಕೆಲವು ಸಿಡಿಸಿ ಕಾರ್ಮಿಕರು ಗುತ್ತಿಗೆದಾರರ ಮೇಲ್ವಿಚಾರಕರೊಂದಿಗೆ ಸೇರಿಕೊಂಡು ಕಾರ್ಮಿಕರಿಂದ ಹಣ ವಸೂಲಿ ಮಾಡಿ ನೇಮಕಾತಿ ಪತ್ರ ಪಡೆದುಕೊಂಡಿದ್ದಾರೆ. ಇದರಿಂದ ಕಳೆದ 10, 15 ವರ್ಷಗಳಿಂದ ಕನಿಷ್ಠ ವೇತನವೂ ಇಲ್ಲದೆ ಇಲಾಖೆಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಕಾರ್ಮಿಕರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ದೂರಿದರು.

ಸುಪ್ರಿಂಕೋರ್ಟ್ ತೀರ್ಪಿನ ಅನ್ವಯ ‘ಡಿ’ ಗ್ರೂಪ್ ಹುದ್ದೆಗಳಿಗೆ ಹೊರಗುತ್ತಿಗೆ ಮೂಲಕ ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಹಾಲಿ ಇರುವ ಕಾರ್ಮಿಕರನ್ನೇ ಕೆಲಸಕ್ಕೆ ನೇಮಕ ಮಾಡಿಕೊಳ್ಳಲು ಅವಕಾಶವಿದೆ. ಇಂತಹ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪಾಸ್ ಆಗಿರಬೇಕು ಎಂಬ ನಿಯಮ ಅನ್ವಯವಾಗುವುದಿಲ್ಲ ಎಂದರು.

ಈ ಕುರಿತು ಈಗಾಗಲೇ ಸಂಘದಿಂದ ಲೋಕಾಯುಕ್ತರು, ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಆದರೂ, ಗುತ್ತಿಗೆದಾರರು ತಮ್ಮ ಇಚ್ಛೆಗೆ ಅನುಸಾರ ನೇಮಕ ಮಾಡಿಕೊಂಡು ಕೆಲಸಕ್ಕೆ ಕಳುಹಿಸುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಸಿಡಿಸಿ ಕಾರ್ಮಿಕರಿಗೆ ಮುಕ್ತಿ ದೊರೆಯುವುದಿಲ್ಲ. ಬದಲಿಗೆ ಸರ್ಕಾರ ಸಿಡಿಸಿ ಕಾರ್ಮಿಕರಿಗೂ ಮತ್ತು ಹೊರಗುತ್ತಿಗೆ ಕಾರ್ಮಿಕರಿಗೂ ವೇತನ ನೀಡುವುದು ಅನಿವಾರ್ಯವಾಗುತ್ತದೆ. ವಿದ್ಯಾರ್ಥಿಗಳಿಂದ ಕಾಲೇಜು ಅಭಿವೃದ್ಧಿಗಾಗಿ ಸಂಗ್ರಹಿಸುವ ಹಣದ ದುರುಪಯೋಗ ತಡೆಗಟ್ಟಲು ಸಾಧ್ಯವಾಗುವುದಿಲ್ಲ ಎಂದು ದೂರಿದರು.

ನ್ಯಾಯಾಲಯದ ಆದೇಶದಂತೆ ಸಿಡಿಸಿ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಕಾರ್ಮಿಕರನ್ನು ನೇಮಿಸಿಕೊಳ್ಳಲು ಗುತ್ತಿಗೆದಾರನಿಗೆ ನಿರ್ದೇಶನ ನೀಡಬೇಕು. ಎಸ್‌ಎಸ್‌ಎಲ್‌ಸಿ ಕಡ್ಡಾಯಗೊಳಿಸಬಾರದು. ಯಾವುದಾದರೂ ಕಾಲೇಜುಗಳಿಗೆ ಹೆಚ್ಚುವರಿಯಾಗಿ ಹುದ್ದೆಗಳು ಸೃಷ್ಟಿಯಾಗಿದ್ದರೆ ಬೇರೆ ಹತ್ತಿರದ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸಿರುವ ಸಿಡಿಸಿ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲು ಗುತ್ತಿಗೆದಾರರಿಗೆ ನಿರ್ದೇಶನ ನೀಡಬೇಕು. ಒಂದು ವೇಳೆ ಸಹಜ ನ್ಯಾಯ ಪಾಲಿಸದೆ ಗುತ್ತಿಗೆದಾರನ ಇಚ್ಛಾನುಸಾರ ನೇಮಕ ಮಾಡಿಕೊಳ್ಳಲು ಅವಕಾಶ ನೀಡಿದರೆ ಅನಿವಾರ್ಯವಾಗಿ ಪ್ರಾಂಶುಪಾಲರು, ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ಸಂಘದ ಚಂದ್ರಶೇಖರ ಮೇಟಿ, ಸಂಧ್ಯಾ, ಸೀಮಾ, ನಾಗರತ್ನ, ಸುನೀತಾ ಇತರರು ಇದ್ದರು.