ಚನ್ನರಾಯಪಟ್ಟಣ: ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವಹೇಳನಕಾರಿ ಹೇಳಿಕೆ ನೀಡಿದ್ದು, ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ದಲಿತ ಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಯಿತು
.
ಕೃಷ್ಣರಾಜ ವೃತ್ತದ ಬಳಿ ಬುಧವಾರ ಅಂಬೇಡ್ಕರ್ ಭಾವಚಿತ್ರವನ್ನು ಕೈಯಲ್ಲಿ ಹಿಡಿದು ಪ್ರತಿಭಟಿಸಿ, ಕೇಂದ್ರ ಸಚಿವರ ವಿರುದ್ಧ ಘೋಷಣೆ ಕೂಗಿದರು. ಬಿಎಸ್‌ಪಿ ಮುಖಂಡ ಸೋಮಶೇಖರ್ ಮಾತನಾಡಿ, ಅಂಬೇಡ್ಕರ್ ಕುರಿತು ಗೃಹ ಸಚಿವ ಅಮಿತ್ ಷಾ ಹಗುರವಾಗಿ ಮಾತನಾಡಿದರೂ ಪ್ರಧಾನಿ ನರೇಂದ್ರ ಮೋದಿ ಇದೂವರೆಗೂ ಚಕಾರ ಎತ್ತಿಲ್ಲ. ಅಮಿತ್ ಷಾ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಮುಖಂಡ ಕೃಷ್ಣದಾಸ್ ಮಾತನಾಡಿ, ಸಂವಿಧಾನವನ್ನು ಅಂಗೀಕರಿಸಿ 75 ವರ್ಷ ಸಂದಿರುವ ಸಂದರ್ಭದಲ್ಲಿ ಇಂಥ ಹೇಳಿಕೆ ತರವಲ್ಲ. ಅಂಬೇಡ್ಕರ್ ಕುರಿತು ಹಗುರವಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ನಡೆ ಖಂಡನಾರ್ಹ. ಆರ್‌ಎಸ್‌ಎಸ್ ತನ್ನ ರಹಸ್ಯ ಕಾರ್ಯಸೂಚಿಯನ್ನು ಇವರ ಮೂಲಕ ಕಾರ್ಯರೂಪಕ್ಕೆ ತರಲು ಹೊರಟಿದೆ ಎಂದು ದೂರಿದರು.
ದಲಿತ ಮುಖಂಡ ದಿಂಡಗೂರು ಗೋವಿಂದರಾಜು ಮಾತನಾಡಿ, ಅಂಬೇಡ್ಕರ್ ಅವರಿಗೆ ಅವಮಾನವಾಗುವಂತೆ ಕೇಂದ್ರ ಸಚಿವ ಹೇಳಿಕೆ ಕೊಟ್ಟರೂ ಸಹ ಬಿಜೆಪಿಯಲ್ಲಿರುವ ಗೋವಿಂದಕಾರಜೋಳ, ಛಲವಾದಿ ನಾರಾಯಣಸ್ವಾಮಿ ಸುಮ್ಮನಿದ್ದಾರೆ. ಮೌನವಹಿಸಿರುವ ಕಾರಣ ಏನು? ಇವರಿಗೆ ಸಿದ್ಧಾಂತಕ್ಕಿಂತ ಅಧಿಕಾರ ಮುಖ್ಯವೇ ಎಂದು ಮೂದಲಿಸಿದರು.
ಭೀಮ್ ಆರ್ಮಿ ಅಧ್ಯಕ್ಷ ಮಂಜು ಹಿರಿಬಿ, ರೈತ ಸಂಘದ ರಾಜ್ಯಾಧ್ಯಕ್ಷ ಅರಳಾಪುರ ಮಂಜೇಗೌಡ, ತಾಲೂಕು ರೈತ ಸಂಘದ ಅಧ್ಯಕ್ಷ ಸಿ.ಜಿ. ರವಿ, ತಾಲೂಕು ಅಹಿಂದ ವರ್ಗಗಳ ಸಂಘದ ಅಧ್ಯಕ್ಷ ಚಂದ್ರು ಉತ್ತೇನಹಳ್ಳಿ, ಮುಖಂಡರಾದ ಡಿ.ರವಿ.ಪ್ರಕಾಶ್ ವಿರೂಪಾಕ್ಷಿಪುರ, ನಾಗೇಶ್, ಆಲದಹಳ್ಳ ವೆಂಕಟೇಶ್, ಬಡಕನಹಳ್ಳಿ ಲಕ್ಷ್ಮಣ, ಚನ್ನಕೇಶವ, ಯೋಗೀಶ್, ಬಿ.ರಂಗಪ್ಪ, ಯೋಗೀಶ್, ಕಲ್ಕೆರೆ ರಂಗಸ್ವಾಮಿ ಇದ್ದರು
.