ಬಂಕಾಪುರ: ಪಟ್ಟಣದ ಅಂಬೇಡ್ಕರ್ ನಗರದ ಚರಂಡಿಗಳನ್ನು ಸ್ವಚ್ಛಗೊಳಿಸುವಂತೆ ಆಗ್ರಹಿಸಿ ನಗರದ ನಿವಾಸಿಗಳು ಸೋಮವಾರ ಪುರಸಭೆ ಎದುರು ಹಲಗೆ ಬಾರಿಸುವ ಮೂಲಕ ಪ್ರತಿಭಟನೆ ನಡೆಸಿದರು.
ಅಂಬೇಡ್ಕರ್ ನಗರದಲ್ಲಿ ಒಂದು ವರ್ಷದಿಂದ ಸ್ವಚ್ಛತೆ ಮಾಡದ ಕಾರಣ ಚರಂಡಿಗಳು ಹೂಳು ತುಂಬಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇದರಿಂದ ರೋಗ ಹರಡುವ ಭೀತಿ ಎದುರಾಗಿದೆ. ಈ ಕುರಿತು ಪುರಸಭೆಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಸುದ್ದಿ ತಿಳಿದ ಜಿಲ್ಲಾ ಯೋಜನಾಧಿಕಾರಿ ಮಮತಾ ಚನ್ನಗೌಡ್ರ ಪುರಸಭೆ ಸಿಬ್ಬಂದಿಯೊಂದಿಗೆ ಅಂಬೇಡ್ಕರ್ ನಗರಕ್ಕೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆ ಆಲಿಸಿದರು. ಚರಂಡಿಗಳನ್ನು ಸ್ವಚ್ಛಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು. ನಿವಾಸಿಗಳ ಬೇಡಿಕೆಯಂತೆ ಹೊಸ ಚರಂಡಿ ನಿರ್ವಿುಸಲು ಸೂಚಿಸಿದರು. ಹಿರಿಯ ಅಧಿಕಾರಿಗಳ ಭರವಸೆ ಮೇರೆಗೆ ಅಂಬೇಡ್ಕರ್ ನಗರದ ನಿವಾಸಿಗಳು ಪ್ರತಿಭಟನೆ ಹಿಂಪಡೆದರು.
ಪುರಸಭೆ ಮುಖ್ಯಾಧಿಕಾರಿ ಎ. ಶಿವಪ್ಪ, ಪಿಎಸ್ಐ ನಿಂಗರಾಜ ಕೆ.ವೈ., ಇಂಜಿನಿಯರ್ ಮಾಲತೇಶ ಅಗಡಿ, ಬೀರಪ್ಪ ಗಿಡ್ಡಣ್ಣವರ, ಆಂಜನೇಯ ಹೊಸಮನಿ, ಹನುಮಂತಪ್ಪ ಮಾದರ, ರೂಪಾ ನಾಯ್ಕ, ದುರ್ಗಪ್ಪ ಜಂಗಳಿ, ನಾಗಪ್ಪ ಕೂಡಲ, ದುರ್ಗಪ್ಪ ದೊಡಮನಿ, ಸಣ್ಣಿಂಗಪ್ಪ ಮಾದರ, ರೇಖಾ ದೊಡಮನಿ ಇತರರಿದ್ದರು.