ಶಶಿ ಕುತ್ಯಾಳ ಈಶ್ವರಮಂಗಲ
ಜಲಮಟ್ಟ ಕಾಯ್ದುಕೊಳ್ಳುವ ವ್ಯವಸ್ಥೆ ಜತೆಗೆ ಕೃಷಿಕರಿಗೆ ಅನುಕೂಲವಾಗುವ ಉದ್ದೇಶದಿಂದ 4 ದಶಕಗಳ ಹಿಂದೆ ಬೆಟ್ಟಂಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇರ್ದೆ ಗ್ರಾಮದ ಇರ್ದೆ ಪಳ್ಳಿತ್ತಡ್ಕದಲ್ಲಿ ನಿರ್ಮಿಸಲಾದ ಕಿಂಡಿ ಅಣೆಕಟ್ಟು ತಾಲೂಕಿನಲ್ಲೇ ಅತಿ ಉದ್ದದ ಕಿಂಡಿ ಅಣೆಕಟ್ಟು ಎಂದು ಹೆಗ್ಗಳಿಕೆ ಪಡೆದಿದ್ದರೂ ಈಗ ಊಟಕ್ಕಿಲ್ಲದ ಉಪ್ಪಿನಕಾಯಿಂತಾಗಿದೆ.
ದಕ್ಷಿಣ ಭಾರತದ ಏಕೈಕ ಬಿಸಿನೀರಿನ ಬುಗ್ಗೆ ಎಂಬ ಖ್ಯಾತಿ ಪಡೆದ ಬೆಂದ್ರ್‌ತೀರ್ಥದ ಸಮೀಪದಲ್ಲೇ ಈ ಕಿಂಡಿ ಅಣೆಕಟ್ಟು ಇದೆ. ಕೃಷಿಕರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಸೀರೆ ಹೊಳೆಗೆ ಈ ಅಣೆಕಟ್ಟು ನಿರ್ಮಿಸಲಾಗಿತ್ತು. ಕಿಂಡಿ ಅಣೆಕಟ್ಟಿನ ಕಾಲುದಾರಿ ಅಪಾಯಕಾರಿಯಾಗಿ ಪರಿಣಮಿಸಿದ್ದು, ಪರ್ಯಾಯ ಸೇತುವೆ ನಿರ್ಮಾಣ ಮಾಡಬೇಕೆಂದು ಈ ಭಾಗದ ಜನತೆಯ ಬೇಡಿಕೆ.
ಹೊಳೆಯ ಮತ್ತೊಂದು ಭಾಗದಲ್ಲಿ ಸುಮಾರು 75ಕ್ಕೂ ಅಧಿಕ ಮನೆಗಳಿವೆ. ಈ ಭಾಗದ ಜನತೆಗೆ ಬೆಟ್ಟಂಪಾಡಿ ಸೇರಿದಂತೆ ಪೇಟೆಯನ್ನು ಸಂಪರ್ಕಿಸಲು ಇದುವೆ ಅತಿ ಕಡಿಮೆ ಅಂತರದ ಕಾಲುದಾರಿಯಾಗಿದೆ. ಮಳೆಗಾಲದಲ್ಲಿ ಕಿಂಡಿ ಅಣೆಕಟ್ಟು ಮುಳುಗಡೆಯಾಗುತ್ತಿರುವುದರಿಂದ ಈ ಭಾಗದ ಎಲ್ಲರೂ ಸುತ್ತುಬಳಸಿ ಸಾಗುತ್ತಿದ್ದಾರೆ. ತಡೆಬೇಲಿಯೂ ಇಲ್ಲವಾಗಿದ್ದು, ಅಪಾಯಕ್ಕೆ ಕರೆ ನೀಡಿದೆ. ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಿಂಡಿ ಅಣೆಕಟ್ಟು ಪದೇಪದೆ ಮುಳುಗುತ್ತಿದೆ. ಹಾಗಾಗಿ ಬೆಟ್ಟಂಪಾಡಿ ಗ್ರಾ.ಪಂ ಇಲ್ಲಿ ಸಂಚಾರ ನಿಷೇಧಿಸಿದೆ.
ಈ ಕಿಂಡಿ ಅಣೆಕಟ್ಟು ಕಾಲುದಾರಿಗೆ ಇಬ್ಬರ ಬಲಿ ಪಡೆದ ಕುಖ್ಯಾತಿ ಇದೆ. ಇರ್ದೆ ಗ್ರಾಮದಲ್ಲಿ ನಡೆದಿದ್ದ ದೈವಕೋಲಕ್ಕೆ ಬಂದಿದ್ದ ಕೇರಳದ ಕಾಸರಗೋಡು ಕಡೆಯ ಇಬ್ಬರು ಮಹಿಳೆಯರು ಇದೇ ಕಿಂಡಿ ಅಣೆಕಟ್ಟಿನ ಮೇಲೆ ತೆರಳುತ್ತಿದ್ದಾಗ ಕಾಲು ಜಾರಿ ಹೊಳೆಗೆ ಬಿದ್ದು ಮೃತಪಟ್ಟಿದ್ದರು.
ಕಿಂಡಿ ಅಣೆಕಟ್ಟು ನಿರ್ಮಾಣದಿಂದ ಆ ಭಾಗದ ಕೃಷಿಕರಿಗೆ ಅನುಕೂಲವಾಗಿತ್ತು. 30ಕ್ಕೂ ಅಧಿಕ ಮನೆಯವರು ಜತೆಸೇರಿ ಅಣೆಕಟ್ಟಿಗೆ ಹಲಗೆ ಜೋಡಿಸಿ ನೀರು ಶೇಖರಿಸುತ್ತಿದ್ದರು. ಈಗ ಹಲಗೆ ಶಿಥಿಲಗೊಂಡಿದ್ದು, ಜಿಲ್ಲಾ ಪಂಚಾಯಿತಿಗೆ ಮನವಿ ಮಾಡಿದ್ದರೂ ಪೂರಕ ಸ್ಪಂದನೆ ದೊರೆತಿರಲಿಲ್ಲ.ಬಳಿಕ ಜಿ.ಪಂ.ನ 2 ಲಕ್ಷ ರೂ. ಅನುದಾನದಲ್ಲಿ ಅಣೆಕಟ್ಟು ದುರಸ್ತಿಗೊಳಿಸಿ ಮೇಲ್ಬಾಗವನ್ನು ಕಾಂಕ್ರೀಟಿಕರಣಗೊಳಿಸುವ ಮೂಲಕ ಕಾಲು ದಾರಿ ನಿರ್ಮಿಸಲಾಗಿತ್ತು.
ನಾಲ್ಕು ದಶಕಗಳಿಗೂ ಹಿಂದೆ ನಿರ್ಮಿಸಿದ ಕಿಂಡಿ ಅಣೆಕಟ್ಟು ಇದಾಗಿದೆ. ಕಾಲುದಾರಿಯೂ ಆಗಿರುವುದರಿಂದ ಈಗ ಅಪಾಯಕಾರಿ ಸ್ಥಿತಿಯಲ್ಲಿದೆ. ಎರಡೂ ಭಾಗದಲ್ಲಿ ಗ್ರಾಮ ಪಂಚಾಯಿತಿ ಸಂಪರ್ಕ ರಸ್ತೆಯಿದೆ. ಹಳೆಯ ಚೆಲ್ಯಡ್ಕ ಮುಳುಗು ಸೇತುವೆ ಅಭಿವೃದ್ಧಿಗೆ ಈಗಾಗಲೇ ಕ್ರಮ ಆಗುತ್ತಿದ್ದು, ಇಲ್ಲಿಯೂ ಸುಸಜ್ಜಿತ ಸೇತುವೆ ನಿರ್ಮಿಸಿ ಜನರಿಗೆ ಸೌಲಭ್ಯ ಕಲ್ಪಿಸಲು ಅನುದಾನ ಒದಗಿಸುವಂತೆ ಶಾಸಕರಿಗೆ ಮನವಿ ಮಾಡುತ್ತೇವೆ. - ಕೃಷ್ಣಪ್ರಸಾದ್ ಆಳ್ವ, ಪುತ್ತೂರು ಭೂನ್ಯಾಯ ಮಂಡಳಿ ಸಮಿತಿ ಸದಸ್ಯ ಬೆಟ್ಟಂಪಾಡಿ ಗ್ರಾಪಂ ಕೈಗೊಂಡ ನಿರ್ಣಯದ ಮೇರೆಗೆ ಆಗಿನ ಶಾಸಕ ಸಂಜೀವ ಮಠಂದೂರು ಈ ಕಿಂಡಿ ಅಣೆಕಟ್ಟಿನ ಸಮೀಪದಲ್ಲೇ ಸಂಪರ್ಕ ಸೇತುವೆ ನಿರ್ಮಾಣಕ್ಕೆ 3 ಕೋಟಿ ರೂ.ಪ್ರಸ್ತಾವನೆ ಕಳುಹಿಸಿದ್ದರು. ಅಧಿಕಾರಿಗಳೂ ಸ್ಥಳ ಪರಿಶೀಲಿಸಿದ್ದರು. ಸರ್ಕಾರ ಬದಲಾದ ಕಾರಣ ಯೋಜನೆ ಮುಂದುವರಿದಿಲ್ಲ. ಹಾಲಿ ಶಾಸಕರು ಇದಕ್ಕೆ ಅನುದಾನ ಒದಗಿಸಬೇಕು. - ಪ್ರಕಾಶ್ ರೈ ಬೈಲಾಡಿ, ಬೆಟ್ಟಂಪಾಡಿ ಗ್ರಾ.ಪಂ.ಸದಸ್ಯ ತಡೆಬೇಲಿಯೂ ಇಲ್ಲದ ಕಿಂಡಿ ಅಣೆಕಟ್ಟಿನಲ್ಲಿ ಓಡಾಡುವುದು ಅಪಾಯಕಾರಿ. ಅಪಾಯ ತಡೆಯುವ ನಿಟ್ಟಿನಲ್ಲಿ ಕಿಂಡಿ ಅಣೆಕಟ್ಟಿನ ಎರಡೂ ತುದಿಗಳಲ್ಲಿ ತಡೆಬೇಲಿ ನಿರ್ಮಿಸಿ, ಎಚ್ಚರಿಕೆಯ ಬ್ಯಾನರ್ ಅಳವಡಿಸಿ ಜನರು ಸಂಚರಿಸದ ಹಾಗೆ ಮಾಡಿದ್ದೇವೆ. ಮಾತ್ರವಲ್ಲದೆ ಸ್ಥಳೀಯರ ಸಭೆ ಕರೆದು ಎಚ್ಚರದಿಂದ ಇರಲು ತಿಳಿಸಿದ್ದೇವೆ. ಶೀಘ್ರವೇ ಪರ್ಯಾಯವಾಗಿ ಎತ್ತರದ ಸೇತುವೆ ನಿರ್ಮಾಣ ಮಾಡುವ ಬಗ್ಗೆ ಸರ್ಕಾರ ಗಮನ ಹರಿಸಬೇಕು. - ವಿದ್ಯಾಶ್ರೀ, ಬೆಟ್ಟಂಪಾಡಿ ಗ್ರಾಪಂ ಅಧ್ಯಕ್ಷೆ https://www.vijayavani.net/an-ancient-lake-nearing-its-end